ಮೊಬೈಲ್ ಬಳಕೆಯಿಂದ ಭಾರತೀಯ ಸಂಸ್ಕೃತಿಗೆ ಧಕ್ಕೆ

VMS 10-11
Published on

ವಿಜಯಪುರ: ಮೊಬೈಲ್ ಹಾಗೂ ಜಾಲತಾಣಗಳನ್ನು ತಡಕಾಡುವುದರಿಂದ ವಿದ್ಯಾರ್ಥಿಗಳಿಗೆ ಒಂಟಿತನ ಕಾಡುವುದು. ಅವರ ಶೈಕ್ಷಣಿಕ ಬೆಳವಣಿಗೆಗೆ ಪುಸ್ತಕ ಓದು ಹಾಗೂ ಬರಹ ಸಹಕಾರಿ ಎಂದು ಹಿರಿಯ ನ್ಯಾಯವಾದಿ, ಸಾಹಿತಿ ಮಲ್ಲಿಕಾರ್ಜುನ ಭೃಂಗಿಮಠ ಹೇಳಿದರು.
ಗೋಲಗುಮ್ಮಟದ ಹೊರ ಆವರಣದಲ್ಲಿ ಕಾಳಗಿಯ ಜಗಜ್ಯೋತಿ ಬಸವೇಶ್ವರ ಪಪೂ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಶುಕ್ರವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಇಂದಿನ ಯುವ ಪೀಳಿಗೆ ಟಿವಿ, ಮೊಬೈಲ್, ವಾಟ್ಸ್‌ಆ್ಯಪ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶ, ಇತ್ಯಾದಿ ಆಟಗಳಲ್ಲಿ ಮಗ್ನರಾಗಿ ಶಾಲೆ-ಕಾಲೇಜು ಹಾಗೂ ಮನೆಗೆ ಮಾತ್ರ ಸೀಮಿತರಾಗುತ್ತಿದ್ದಾರೆ. ದೇಶ-ವಿಶ್ವ ಇತಿಹಾಸದ ಅರಿವಿಲ್ಲದೇ ತಮ್ಮಷ್ಟಕ್ಕೆ ತಾವೇ ಇರುವ ಸ್ವಭಾವ ಬೆಳೆಸಿಕೊಂಡು ಏಕಾಂಗಿತನಕ್ಕೆ ಮಾರು ಹೋಗುತ್ತಿದ್ದಾರೆ. ಮನೆಯಲ್ಲಿ ಅಪ್ಪ, ಅಮ್ಮ, ಮಕ್ಕಳು ಒಂದೊಂದು ಮೊಬೈಲ್‌ನಲ್ಲಿ ಮಗ್ನರಾಗುವುದರಿಂದ ಭಾರತೀಯ ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ ಎಂದು ಹೇಳಿದರು.
ಮಹಾವಿದ್ಯಾಲಯದ ಪ್ರಾಂಶುಪಾಲ ಕಾಶಿನಾಥ ಗುತ್ತೇದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಾವು ಕೈಕೊಂಡಿರುವ ಪ್ರವಾಸದ ಬಗ್ಗೆ ಪ್ರವಾಸಕಥನ ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪೆನ್ಲೆಸ್ ಜೀವನದ ಬದಲು, ಪೆನ್ನುಸಹಿತ ಜೀವನ ಇರಬೇಕು. ಕಂಪ್ಯೂಟರ್ ಯುಗದಲ್ಲೂ ವಿದ್ಯಾರ್ಥಿಗಳು ಅದರ ಜತೆಗೆ ಕೈಬರಹ ಪದ್ಧತಿ ಮರೆಯಬಾರದು. ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಲೇಖನ, ಕವಿತೆ ಬರೆಯುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.
ಕೆಪಿಪಿ ಅಧ್ಯಕ್ಷ ಪ್ರಕಾಶ ಕುಂಬಾರ ಮಾತನಾಡಿ, ಪ್ರವಾಸ ಮಾಡುವ ಹವ್ಯಾಸ ಪ್ರತಿಯೊಬ್ಬರೂ ರೂಢಿಸಿಕೊಂಡರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದರು. ಲಕ್ಷ್ಮಿಕಾಂತ ಗಂಗಾ, ಶಿವುಕುಮಾರ ಗುತ್ತೇದಾರ, ಯಲ್ಲಾಲಿಂಗ ಸೂಗೂರು ಮತ್ತಿತರರು ಮಾತನಾಡಿದರು. ರಾಜಶೇಖರ ಸ್ವಾಮಿ ಪ್ರಾರ್ಥಿಸಿದರು. ಭವ್ಯಾ ಸೂರವಾರ ಸ್ವಾಗತಿಸಿದರು. ನಾಗವೇಣಿ ಸಲಗೂರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net