ಬೆಳೆದ ಬೆಳೆಯಲ್ಲಾ ಜಲಾರ್ಪಣ..!

VJP-12-Doni
Published on

ಶಶಿಕಾಂತ ಮೆಂಡೆಗಾರ,
ವಿಜಯಪುರ:
ಹೂಳು ತುಂಬಿದ ಡೋಣಿಯಿಂದ ಪ್ರವಾಹ… ಜಲ ಪ್ರವಾಹದಲ್ಲಿ ಸಿಲುಕಿದ ಬೆಳೆಗಳೆಲ್ಲ ನಾಶ… ನದಿ ಇಕ್ಕೆಲಗಳಲ್ಲಿನ ಪರಿಸ್ಥಿತಿ ಅವಲೋಕಿಸಿದರೆ ನದಿಯಲ್ಲಿ ಜಮೀನಿದೆಯೋ ಅಥವಾ ಜಮೀನಿಗೆ ನದಿಯೇ ನುಗ್ಗಿದೆಯೋ ಎಂಬ ಅನುಮಾನ ಬರುತ್ತಿದೆ.

ಇದು ದೋಣಿ ನದಿ ಉಕ್ಕಿ ಹರಿದ ಸೃಷ್ಟಿಯಾದ ಕೃತಕ ನದಿ. ಎತ್ತ ನೋಡಿದರೂ ಸುತ್ತಲೂ ನೀರೇ ನೀರು ಕಾಣುತ್ತಿರುವ ಈ ಭೂಮಿ ರೈತರ ಜಮೀನಾಗಿದ್ದು, ಡೋಣಿ ನದಿ ಉಕ್ಕಿ ಹರಿದು ರೈತರ ಜಮೀನಿಗೆ ನುಗ್ಗಿದ್ದರಿಂದ ಇಂತಹ ಜಲಪ್ರಳಯ ಉದ್ಭವಿಸಿದೆ.

ಬಬಲೇಶ್ವರ, ವಿಜಯಪುರ, ಮುದ್ದೇಬಿಹಾಳ, ತಾಳಿಕೋಟೆ ಮಾರ್ಗದಲ್ಲಿ ಹರಿಯುವ ಡೋಣಿ ನದಿಯಲ್ಲಿ ಪ್ರತಿ ಬಾರಿ ಮಳೆ ಬಂದಾಗಲೂ ಸಹ ಪ್ರವಾಹ ಉಕ್ಕಿ ಹರಿಯುತ್ತಿದೆ.

30 ವರ್ಷದಿಂದ ತೆಗೆಯದ ಹೂಳು
ಇದಕ್ಕೆ ಮುಖ್ಯ ಕಾರಣವೆಂದರೆ ಕಳೆದ 30 ವರ್ಷಗಳಿಂದ ಹೂಳು ತೆಗೆಯದಿರುವುದು. ನದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೂಳು ತುಂಬಿದ್ದರಿಂದ ಮಳೆಯಾದಾಗ ನೀರು ನದಿಯ ಮಾರ್ಗದಲ್ಲಿ ಹರಿಯದೆ, ಅಕ್ಕಪಕ್ಕದ ಜಮೀನುಗಳಿಗೆ ನುಗ್ಗಿಬಿಡುತ್ತದೆ. ಇದರಿಂದಾಗಿ ನದಿಯ ಇಕ್ಕೆಲಗಳಲ್ಲಿರುವ ಸಾವಿರಾರು ಎಕರೆ ಭೂಮಿ ಜಲಾವೃತವಾಗಿ ರೈತರು ಕೈಗೆ ಬಂದ ಬೆಳೆಗಳನ್ನು ಕಳೆದುಕೊಳ್ಳುತ್ತಿದ್ದಾರೆ.

ಬಬಲೇಶ್ವರ ತಾಲೂಕಿನ ಕಣಮುಚನಾಳ, ತೊನಶ್ಯಾಳ, ಸವನಹಳ್ಳಿ, ಹೊನಗನಹಳ್ಳಿ, ಸಾರವಾಡ ಭಾಗದಲ್ಲಿ ಡೋಣಿ ಉಕ್ಕಿ ಹರಿದಿದ್ದು ಈರುಳ್ಳಿ, ಕಡಲೆ, ಜೋಳ, ತೊಗರಿ ಬೆಳೆಗಳೆಲ್ಲ ಜಲಾವೃತವಾಗಿವೆ. ಸುಮಾರು ಒಂದು ಸಾವಿರಕ್ಕೂ ಅಧಿಕ ಎಕರೆ ಭೂಮಿಯಲ್ಲಿನ ಬೆಳೆಗಳೆಲ್ಲವೂ ಇದೀಗ ನೀರಲ್ಲಿ ನಿಂತಿವೆ.

ಹೀಗಾಗಿ ರೈತರು ಸಾಲ ಸೋಲ ಮಾಡಿ ಬೀಜ, ಗೊಬ್ಬರ ತಂದು ಬಿತ್ತನೆ ಮಾಡಿದ್ದ ಬೆಳೆಗಳು ಇನ್ನೇನು ಕೈಗೆ ಬರಬೇಕು ಎನ್ನುವಷ್ಟರಲ್ಲಿ ಡೋಣಿ ಎಲ್ಲವನ್ನು ನುಂಗಿ ಹಾಕಿದೆ. ಹತ್ತಾರು ವರ್ಷಗಳಿಂದ ಡೋಣಿಯ ಹೂಳು ತೆಗೆಯದ್ದರಿಂದ ಹೀಗೆ ಅವಾಂತರ ಆಗುತ್ತಿದ್ದು, ಮೊದಲು ಡೋಣಿಯ ಹೂಳು ತೆಗೆಯುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಡೋಣಿ ನದಿಯಲ್ಲಿ ಹೂಳು ತೆಗೆಯದೇ ಇರುವುದರಿಂದ ಮಳೆ ಬಂದರೇ ಸಾಕು ಡೋಣಿ ಉಕ್ಕಿ ಹರಿದು ನದಿಯ ಇಕ್ಕೆಲದಲ್ಲಿರುವ ಭೂಮಿಯನ್ನು ಆವರಿಸಿಕೊಂಡು ಬೆಳೆದ ಬೆಳೆಗಳೆಲ್ಲವೂ ಹಾಳಾಗುತ್ತಿದೆ. ಮಿತಿಮೀರಿದ ಮಳೆ, ಅತಿಯಾದ ಪ್ರವಾಹದಿಂದಾಗಿ ಕಳೆದ ತಿಂಗಳು ಬೆಳೆಗಳೆಲ್ಲವೂ ಜಲಾವೃತವಾಗಿ ನಷ್ಟ ಮಾಡಿಕೊಂಡಿದ್ದ ರೈತರು ಮತ್ತೊಮ್ಮೆ ಬಿತ್ತನೆ ಮಾಡಿದ್ದರು, ಅದೂ ಸಹ ಈ ಬಾರಿ ಡೋಣಿ ಹೂಳಿನಿಂದಾಗಿ ಬೆಳೆಗಳೆಲ್ಲಾ ಮತ್ತೆ ನೀರಲ್ಲಿ ಕೊಚ್ಚಿ ಹೋಗಿರುವುದರಿಂದ ಸರ್ಕಾರ ಕೂಡಲೇ ಪರಿಹಾರ ಒದಗಿಸಬೇಕು.
ಚನ್ನಪ್ಪ ತಿಳಗೋಳ, ಅನೀಲ ಚವ್ಹಾಣ,
ಭೂಮಿ ಜಲಾವೃತವಾದ ರೈತರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net