

ವಿಜಯಪುರ: ಭ್ರೂಣ ಹತ್ಯೆ ಮಾಡಿದ್ದಲ್ಲದೇ ಗರ್ಭಿಣಿಯ ಪ್ರಾಣಾಪಾಯಕ್ಕೆ ಕಾರಣರಾದ ನಾಲ್ವರ ಮೇಲೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಜೂನ್ 11 ರಂದೇ ಪ್ರಕರಣ ದಾಖಲಾಗಿದ್ದು ಘಟನೆಯಲ್ಲಿ ಶಿಶು ಹತ್ಯೆಯಾಗಿದ್ದು, ಗರ್ಭಿಣಿ ಸಾವು ಬದುಕಿನ ನಡುವೆ ಹೋರಾಡುತ್ತಿರುವುದಾಗಿ ತಿಳಿಸಲಾಗಿದೆ.
ಸ್ಥಳೀಯ ಚಿದಂಬರ ನಗರದ ನಿವಾಸಿ ವಿಜಯಲಕ್ಷ್ಮಿ ಎಂಬುವವರು ನೊಂದ ಗರ್ಭಿಣಿಯಾಗಿದ್ದು, ಇದಕ್ಕೆ ಕಾರಣರಾದ ಪತಿ ಅರವಿಂದ ಹಡಪದ, ಅಕ್ಕ ಭಾಗೀರಥಿ ಅಮ್ಮಣ್ಣ ಹಿಪ್ಪರಗಿ ಹಾಗೂ ಇನ್ನಿಬ್ಬರು ಮಹಿಳೆ ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆದರೆ, ಇನ್ನಿಬ್ಬರು ಮಹಿಳೆ ಮತ್ತು ಆ ಹಲವರ ವಿವರ ಸ್ಪಷ್ಟವಾಗಿಲ್ಲ.
ಘಟನೆ ವಿವರ
ವಿಜಯಲಕ್ಷ್ಮಿಗೆ ಈಗಾಗಲೇ ಎರಡು ಹೆಣ್ಣು ಮಕ್ಕಳಿದ್ದು ಮೂರನೇಯದ್ದು ಸಹ ಹೆಣ್ಣಾಗಬಹುದೆಂಬ ಆತಂಕದಿಂದ ಸ್ಕಾೃನಿಂಗ್ ಮಾಡಿಸಲು ಹೋಗಿದ್ದಾರೆ. ಸ್ಕಾೃನಿಂಗ್ ವೇಳೆ ಗರ್ಭದಲ್ಲಿ ಹೆಣ್ಣು ಇದೆ ಎಂದು ಸೆಂಟರ್‌ನವರು ತಿಳಿಸಿದ್ದಾರೆ. ತಪಾಸಣೆ ಮಾಡಿದ್ದಕ್ಕೆ ಯಾವುದೇ ರುಜು ಹಾಕಿಸಿಕೊಂಡಿಲ್ಲ. ಅಲ್ಲಿಂದ ವಿಜಯಲಕ್ಷ್ಮಿಯನ್ನು ಓರ್ವ ಬೈಕ್ ಮೇಲೆ ಕೂರಿಸಿಕೊಂಡು ಹೋಗಿ ಓರ್ವ ಮಹಿಳೆಯಿಂದ ಗರ್ಭಪಾತದ ಮಾತ್ರೆ ಕೊಟ್ಟಿದ್ದಾರೆ. ಇದರಿಂದ ವಿಜಯಲಕ್ಷ್ಮಿಗೆ ತುಂಬ ತೊಂದರೆಯಾಗಿ ಕರಳು ಹೊರಗೆ ಬಂದು ತೀವ್ರ ರಕ್ತ ಸ್ರಾವವಾಗಿದೆ. ಬೈಕ್ ಮೇಲೆ ಬಂದಾತ ಮರಳಿ ವಿಜಯಲಕ್ಷ್ಮಿಯನ್ನು ಹೈಪರ್ ಮಾರ್ಟ್ ಬಳಿ ತಂದು ಬಿಟ್ಟು ಹೋಗಿದ್ದಾನೆ. ನೊಂದ ಮಹಿಳೆಯನ್ನು ಸಂಬಂಧಿಕರು ಡಾ. ಸಾಸನೂರ ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಡವಾಗಿ ಪ್ರಕರಣ ದಾಖಲು
ಜೂನ್ 7 ರಂದೇ ಘಟನೆ ನಡೆದಿದೆ. ಜೂ.9 ರಂದು ಜಿಲ್ಲಾ ಪರಿವೀಕ್ಷಣಾ ಸಮಿತಿಗೆ ಮಾಹಿತಿ ಲಭ್ಯವಾಗಿದೆ. ಆಸ್ಪತ್ರೆಯಿಂದಲೇ ವಿಷಯ ತಿಳಿಸಲಾಗಿದ್ದು, ಸಮಿತಿ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ವಿವರಣೆ ಪಡೆದಿದ್ದಾರೆ. ಈ ವೇಳೆ ಇದೊಂದು ಹೆಣ್ಣು ಭ್ರೂಣ ಹತ್ಯೆ ಎಂಬುದು ಗೊತ್ತಾಗಿದೆ. ಈ ಬಗ್ಗೆ ಜೂ. 11 ರಂದು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಜೂನ್ 14 ರಂದು ಜಿಲ್ಲಾಡಳಿತ ಮಾಹಿತಿ ಬಹಿರಂಗಗೊಳಿಸಿದೆ.
ಆದರೆ, ಸದರಿ ಪ್ರಕರಣದ ಮುಂದಿನ ತನಿಖೆ ಏನಾಯಿತು? ಗರ್ಭಿಣಿಯ ಸ್ಥಿತಿ ಹೇಗಿದೆ? ಇನ್ನುಳಿದ ಆರೋಪಿಗಳು ಪತ್ತೆಯಾದರೇ? ಹೆಣ್ಣು ಶಿಶುವನ್ನು ಪತ್ತೆ ಹಚ್ಚಿದ ಸ್ಕಾೃನಿಂಗ್ ಸೆಂಟರ್ ಹೆಸರೇನು? ಎಂಬಿತ್ಯಾದಿ ವಿವರ ತನಿಖಾಧಿಕಾರಿಗಳು ಹೊರಹಾಕಬೇಕಿದೆ.