

ವಿಜಯಪುರ: ರೈತರ ಒಪ್ಪಿಗೆ ಇಲ್ಲದೆ ಅವರ ಜಮೀನಿನ ಮೇಲೆ ಅನಧಿಕೃತವಾಗಿ ಸಾಲ ಪಡೆದು ಮೋಸ ಮಾಡಿರುವ ಹಾವಿನಾಳ ಸಕ್ಕರೆ ಕಾರ್ಖಾನೆ ಮೇಲೆ ಕ್ರಮ ಕೈಗೊಳ್ಳುವಂತೆ ಶಾಸಕ ಡಾ.ದೇವಾನಂದ ಚವ್ಹಾಣ್ ಬೆಳಗಾವಿಯ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಇಲಾಖೆ ಆಯುಕ್ತರಿಗೆ ಬುಧವಾರ ಮನವಿ ಸಲ್ಲಿಸಿದರು.
ನಾಗಠಾಣ ಮತಕ್ಷೇತ್ರದ ಹಾವಿನಾಳ ಗ್ರಾಮದ ಇಂಡಿಯನ್ ಶುಗರ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಹೆಸರಿನ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ರೈತರಿಗೆ ಪ್ರೋತ್ಸಾಹ ಧನ ಪಾವತಿಸದೆ ಹಾಗೂ ರೈತರ ಒಪ್ಪಿಗೆ ಇಲ್ಲದೆ ಅವರ ಜಮೀನು ಮೇಲೆ ಅನಧಿಕೃತವಾಗಿ ಸಾಲ ಪಡೆದಿದೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದು, ಕಾರ್ಖಾನೆ ಮೇಲೆ ಕ್ರಮ ಕೈಗೊಳ್ಳುವಂತೆ ಆವರು ಒತ್ತಾಯಿಸಿದರು.
ಬ್ಯಾಂಕ್ ಆಫ್ ಇಂಡಿಯಾ, ನಿಂಬರಗಿ ಬ್ರಾೃಂಚ್‌ನಿಂದ ರೈತರ ಒಪ್ಪಿಗೆ ಇಲ್ಲದೆ ಅವರ ಹೆಸರಿನ ಮೇಲೆ 16 ಕೋಟಿ ರೂ. ಸಾಲ ಪಡೆದಿದ್ದಾರೆ. ರೈತರ ಜಮೀನಿನ ಗೇಣಿ ಮತ್ತು ಪಹಣಿ ಪತ್ರಿಕೆಯಲ್ಲಿ ಬೋಜಾ ದಾಖಲಿಸಲಾಗಿದೆ. ತಮ್ಮ ಹೆಸರಿನ ಮೇಲೆ ಪಡೆಯಲಾಗಿರುವ ಸಾಲವನ್ನು ತೀರುವಳಿ ಮಾಡುವಂತೆ ರೈತರು ಒತ್ತಾಯಿಸುತ್ತಿದ್ದಾರೆಂದು ಡಾ.ದೇವಾನಂದ ತಿಳಿಸಿದರು.
ಪ್ರತಿ ಟನ್ ಕಬ್ಬಿಗೆ 200ರೂ. ಪ್ರೋತ್ಸಾಹ ಧನ ನೀಡುವಂತೆ ರೈತರು ಕಾರ್ಖಾನೆ ಮುಂದೆ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಕಾರ್ಖಾನೆ ಆಡಳಿತ ಮಂಡಳಿಯವರೊಂದಿಗೆ ಸುದೀರ್ಘವಾಗಿ ಚರ್ಚಿಸಿದಾಗ ರೈತರಿಂದ ಖರೀದಿಸಿದ ಪ್ರತಿ ಟನ್ ಕಬ್ಬಿಗೆ 200 ರೂ. ಪ್ರೋತ್ಸಾಹ ಧನ ನೀಡುವುದಾಗಿ ಒಪ್ಪಿಕೊಂಡ ಬಳಿಕ ಧರಣಿ ಹಿಂಪಡೆಯಲಾಯಿತು. ಆದರೆ ಕಾರ್ಖಾನೆ ಆಡಳಿತ ಮಂಡಳಿಯವರು ಈ ಹಿಂದೆ ನೀಡಿದ ವಾಗ್ದಾನದಂತೆ ಪ್ರೋತ್ಸಾಹ ಧನ ನೀಡದೆ ಇದ್ದುದರಿಂದ ಆಕ್ರೋಶಭರಿತರಾದ ರೈತರು ಮತ್ತೆ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು ಆ.18 ರಂದು ಸಭೆ ನಡೆಸಿ ಅವರ ಮೇಲೆ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದ್ದಾರೆ. ಅದರಂತೆ ಬಸವೇಶ್ವರ ಸಕ್ಕರೆ ಕಾರ್ಖಾನೆ ನಿ. ಕಾರಜೋಳ ಇವರು ಸಹ 2020-21 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರಿಂದ ಖರೀದಿಸಿದ ಕಬ್ಬಿನ ಬಾಬ್ತು 22.10 ಕೋಟಿ ರೂ.ಬಾಕಿ ಇರಿಸಿಕೊಂಡಿದ್ದಾರೆ. ತುರ್ತಾಗಿ ಬಾಕಿ ಹಣ ಪಾವತಿ ಮಾಡುವಂತೆ ಸಂಬಂಧಪಟ್ಟ ಕಾರ್ಖಾನೆ ಮಾಲೀಕರಿಗೆ ನಿರ್ದೇಶನ ನೀಡಲು ಡಾ.ದೇವಾನಂದ ಚವ್ಹಾಣ್ ಆಗ್ರಹಿಸಿದರು.