

ವಿಜಯಪುರ: ಜೀವನದಲ್ಲಿ ಸಾಧನೆ ಮಾಡಬೇಕಾದರೆ ಗುರಿ ಒಂದೇ ಇದ್ದರೆ ಸಾಲದು. ಜತೆಗೆ ಆತ್ಮಸೈರ್ಯ ಮತ್ತು ಸಾಧಿಸುವ ಛಲ ಇರಬೇಕು ಎಂದು ವಿಜಯಪುರ ಎಪಿಎಂಸಿ ಪೊಲೀಸ್ ಠಾಣೆ ಪಿಎಸ್‌ಐ ಸೋಮೇಶ ಗೆಜ್ಜಿ ಹೇಳಿದರು.
ಇಲ್ಲಿನ ಆದರ್ಶ ನಗರದಲ್ಲಿರುವ ಎಕ್ಸಲಂಟ್ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶನಿವಾರ ನಡೆದ 2019-20 ನೇ ಸಾಲಿನ ವಾರ್ಷಿಕ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿಕಾಸ ಸಂಸ್ಥೆ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜತೆಗೆ ಒಳ್ಳೆಯ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ಕೇವಲ ಅಂಕಗಳಿಸುವುದು ಒಂದೇ ಸಾಧನೆ ಅಲ್ಲ. ಅದರ ಜತೆಗೆ ಕ್ರೀಡೆ, ಸಂಗೀತ, ಸಾಹಿತ್ಯ ಮತ್ತು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ವಿಕಾಸ ಸಂಸ್ಥೆ ನಿರ್ದೇಶಕ ಮಂಜುನಾಥ ಕೌಲಗಿ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಸಾಧನೆ ಮಾಡಬೇಕಾದರೆ ಆಸಕ್ತಿ, ಶ್ರದ್ದ್ಧೆ, ಆತ್ಮವಿಶ್ವಾಸ ಮತ್ತು ಧೈರ್ಯವನ್ನು ರೂಢಿಸಿಕೊಳ್ಳಬೇಕೆಂದರು.
ವಿಕಾಸ ಸಂಸ್ಥೆ ನಿರ್ದೇಶಕ ದಯಾನಂದ ಕೆಲೂರ, ಸಂಸ್ಥೆಯ ಗೌರವಾನ್ವಿತ ಸದಸ್ಯ ರಾಜಶೇಖರ ಕೌಲಗಿ ಮಾತನಾಡಿದರು.
2018-19ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ವೀಣಾ ಈಸರೆಡ್ಡಿ, ದ್ವಿತೀಯ ಸ್ಥಾನ ಪಡೆದ ಅಬ್ದುಲ್ ರೆಹಮಾನ್ ಹಡಗಿನಾಳ ಮತ್ತು ತೃತೀಯ ಸ್ಥಾನ ಪಡೆದ ದಾನೇಶ್ವರಿ ಹಿಪ್ಪರಗಿ ಅವರನ್ನು ಸನ್ಮಾನಿಸಲಾಯಿತು. ಶಾಲೆ ಮುಖ್ಯ ಶಿಕ್ಷಕ ಎಂ.ಐ.ಬಿರಾದಾರ, ಪ್ರೌಢಶಾಲೆ ಮೇಲ್ವಿಚಾರಕ ಎಂ.ಎಚ್.ಹುಗ್ಗೇನವರ, ವಿದ್ಯಾರ್ಥಿಗಳಾದ ರಾಹುಲ ಅನಚಿ, ಮಿಸ್ಬಾ ಅಗಸಿಮನಿ, ಅರ್ಪಿತಾ ವಿಜಾಪುರ ಇತರರಿದ್ದರು.