

ಪರಶುರಾಮ ಭಾಸಗಿ ವಿಜಯಪುರ
ಹಳ್ಳಿ ಫೈಟ್ ಹಿನ್ನೆಲೆ ಗ್ರಾಪಂಗಳಿಗೆ ಶುಕ್ರದೆಸೆ ಶುರುವಾಗಿದ್ದು, ಅಧಿಸೂಚನೆ ಪ್ರಕಟಗೊಂಡಾಗಿನಿಂದ ಈವರೆಗೆ ಜಿಲ್ಲೆಯಲ್ಲಿ 2.62 ಕೋಟಿ ರೂ. ತೆರಿಗೆ ಸಂಗ್ರಹಗೊಂಡಿದೆ. ಗ್ರಾ.ಪಂ. ಸಿಬ್ಬಂದಿ ಮನೆ ಮನೆ ತಿರುಗಿ ಕರ ಪಾವತಿಸುವಂತೆ ದುಂಬಾಲು ಬಿದ್ದರೂ ಕ್ಯಾರೆ ಎನ್ನದವರೀಗ ಚುನಾವಣೆ ಕಣಕ್ಕಿಳಿಯಲು ತಮ್ಮದಷ್ಟೇ ಅಲ್ಲ, ಸೂಚಕರದ್ದೂ ಸೇರಿಸಿ ಬಾಕಿ ಚುಕ್ತಾ ಮಾಡಿದ್ದಾರೆ. ಇದರಿಂದ ಗ್ರಾ.ಪಂ. ತೆರಿಗೆ ಸೂಚ್ಯಂಕ ಏರುಗತಿ ಕಂಡಿದೆ. ಹಲವು ವರ್ಷಗಳ ಕಾಲ ಬಾಕಿ ಇದ್ದ ಮೊತ್ತ ಒಂದೇ ಬಾರಿಗೆ ಚುಕ್ತಾಗೊಂಡಿದ್ದು ಗ್ರಾ.ಪಂ. ಸಿಬ್ಬಂದಿ ಖುಷಿ ಹೆಚ್ಚಿಸಿದೆ.
ಜಿಲ್ಲೆಯ 12 ತಾಲೂಕುಗಳ 199 ಗ್ರಾಪಂಗಳಿಗೆ ಚುನಾವಣೆ ನಡೆಯುತ್ತಿದೆ. ಮೊದಲ ಹಂತರದಲ್ಲಿ 2126 ಸ್ಥಾನಗಳ ಪೈಕಿ ಬಬಲೇಶ್ವರ ತಾಲೂಕಿನ 1 ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. 250 ಜನ ಅವಿರೋಧ ಆಯ್ಕೆಯಾಗಿದ್ದು, 1875 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಇನ್ನು ಎರಡನೇ ಹಂತದಲ್ಲಿ 1628 ಸ್ಥಾನಗಳ ಪೈಕಿ 4 ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಇನ್ನುಳಿದಂತೆ 2520 ನಾಮಪತ್ರ ಸಲ್ಲಿಕೆಯಾಗಿವೆ. ಪ್ರಸ್ತುತ ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ಕಣದಿಂದ ಹಿಂದೆ ಸರಿದಿರುವ ಮತ್ತು ಸರಿಯುತ್ತಿರುವವರೆಲ್ಲರೂ ಬೇಬಾಕಿ ಚುಕ್ತಾ ಮಾಡಿದ್ದಾರೆ. ಅಲ್ಲದೆ, ಸೂಚಕರ ಬಾಕಿ ಸಹ ಭರಣಾ ಮಾಡಿದ್ದರಿಂದ ಪ್ರತಿ 100 ವ್ಯಕ್ತಿಗೆ ಕನಿಷ್ಠ 10 ಜನರ ಬಾಕಿ ಏಕಕಾಲಕ್ಕೆ ಪಾವತಿಯಾದಂತಾಗಿದೆ.
ಜಿಲ್ಲೆಯಲ್ಲಿ ಒಟ್ಟು 2,62,15,107 ರೂ. ತೆರಿಗೆ ಸಂಗ್ರಹಗೊಂಡಿದೆ. ಬಬಲೇಶ್ವರ- 38,56,319, ಚಡಚಣ- 3,37,925, ನಿಡಗುಂದಿ- 12,86, 642, ದೇ.ಹಿಪ್ಪರಗಿ- 16,12,448, ಸಿಂದಗಿ- 26,62,191, ಬ.ಬಾಗೇವಾಡಿ- 31,96,888, ಕೊಲ್ಹಾರ- 20,22, 400, ಮುದ್ದೇಬಿಹಾಳ- 23,41, 963, ತಾಳಿಕೋಟೆ- 5,79,966, ಇಂಡಿ- 6,88,448, ವಿಜಯಪುರ- 43,73,131, ತಿಕೋಟಾ ತಾಲೂಕಿನಲ್ಲಿ 32,56,786 ರೂ. ತೆರಿಗೆ ಸಂಗ್ರಹಗೊಂಡಿದೆ.
ಸದರಿ ತೆರಿಗೆ ಮೊತ್ತದಲ್ಲಿ ಶೇ. 60 ಸಿಬ್ಬಂದಿ ವೇತನ ಹಾಗೂ ಶೇ. 40 ಸ್ಥಳೀಯ ಅಭಿವೃದ್ಧಿಗೆ ಬಳಸಲು ಅವಕಾಶ ಇದೆ. ಹೀಗಾಗಿ ಕ್ರಿಯಾಯೋಜನೆ ಸಿದ್ಧಪಡಿಸುವ ನಿಟ್ಟಿನಲ್ಲಿ ಪಿಡಿಒಗಳು ಆಗಲೇ ತಯಾರಿ ನಡೆಸಿದ್ದಾರೆ. ಇನ್ನೊಂದೆಡೆ ಬಾಕಿ ಇರುವ ವೇತನ ಪಾವತಿಗಾಗಿ ಸಿಬ್ಬಂದಿ ಸಂತಸದಿಂದ ಎದುರು ನೋಡುತ್ತಿದ್ದಾರೆ.
ಒಟ್ಟಿನಲ್ಲಿ ತೆರಿಗೆ ಸಂಗ್ರಹಕ್ಕೆ ನಾನಾ ಕಸರತ್ತು ನಡೆಸುತ್ತಿದ್ದ ಗ್ರಾಪಂ ಸಿಬ್ಬಂದಿಗೆ ಕೊಂಚ ನಿರಾಳವಾಗಿದೆಯಾದರೂ ಜನವರಿಯಿಂದ ಮತ್ತೆ ತೆರಿಗೆ ಸಂಗ್ರಹ ಅಭಿಯಾನ ಆರಂಭಿಸಲು ಉತ್ಸುಕರಾಗಿದ್ದಾರೆ.
ಗ್ರಾಪಂಗಳಲ್ಲಿ ತೆರಿಗೆ ಸಂಗ್ರಹ ನಿರಂತರವಾಗಿರುತ್ತದೆ. ಆದರೆ, ಚುನಾವಣೆ ಹಿನ್ನೆಲೆ ಬಾಕಿ ಇರುವ ತೆರಿಗೆ ಒಟ್ಟಿಗೆ ಸಂಗ್ರಹಗೊಂಡಿದೆ. ಸದರಿ ಮೊತ್ತವನ್ನು ಸಾಮಾನ್ಯ ಸಭೆಯ ನಿರ್ಣಯದಂತೆ ಸ್ಥಳೀಯ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಹುದಾಗಿದೆ.ಲಕ್ಷ್ಮಿಕಾಂತ ರೆಡ್ಡಿ ಜಿ., ಜಿಪಂ ಸಿಇಒ