

ವಿಜಯಪುರ: ಗ್ರಾಪಂ ಚುನಾವಣೆ ಹಿನ್ನೆಲೆ ಜಿಲ್ಲೆಯ ಮತಗಟ್ಟೆ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಲಾಗಿದ್ದು, ಅಧಿಕಾರಿಗಳಿಗೆ ಆಯಾ ತಾಲೂಕು ಕೇಂದ್ರಗಳಲ್ಲಿ ಡಿ. 16 ರಂದು ಬೆಳಗ್ಗೆ 10ಕ್ಕೆ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ತಿಳಿಸಿದ್ದಾರೆ. ಮತಗಟ್ಟೆ ಅಧಿಕಾರಿಗಳ ಪೈಕಿ ಅಧ್ಯಕ್ಷಾಧಿಕಾರಿ(ಪಿಆರ್‌ಒ) ಮತ್ತು ಮೊದಲನೇ ಮತಗಟ್ಟೆ ಅಧಿಕಾರಿ(ಎಪಿಆರ್‌ಒ)ಗಳಿಗೆ ಮಾತ್ರ ಆಯಾ ತಾಲೂಕಿನ ಕೇಂದ್ರಸ್ಥಾನದಲ್ಲಿ ನಿಗದಿಪಡಿಸಲಾದ ಕೇಂದ್ರಗಳಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿದೆ. ಕಾರಣ ಮತಗಟ್ಟೆ ಅಧ್ಯಕ್ಷಾಧಿಕಾರಿ(ಪಿಆರ್‌ಒ) ಮತ್ತು ಮೊದಲನೇ ಮತಗಟ್ಟೆ ಅಧಿಕಾರಿ(ಎಪಿಆರ್‌ಒ)ಗಳಿಗೆ ಮಾತ್ರ ಆಯಾ ತಾಲೂಕಿನ ಕೇಂದ್ರಸ್ಥಾನದಲ್ಲಿ ನಿಗದಿಪಡಿಸಲಾದ ತರಬೇತಿ ಕೇಂದ್ರದಲ್ಲಿ ತಪ್ಪದೆ ಹಾಜರಾಗಬೇಕು. ತರಬೇತಿಗೆ ಗೈರಾದ ಮತ್ತು ಚುನಾವಣಾ ಕರ್ತವ್ಯ ನಿರ್ಲಕ್ಷಿಸುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಎ್ಐಆರ್ ದಾಖಲಿಸಿ, ಪ್ರಜಾ ಪ್ರತಿನಿಧಿ ಕಾಯ್ದೆ 1951 ಕಲಂ 134 ರಡಿ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಅವರು ತಿಳಿಸಿದ್ದಾರೆ.
ವಿಜಯಪುರದ ವಿ.ಬಿ. ದರಬಾರ ಶಾಲೆ, ತಿಕೋಟಾದ ಎ.ಬಿ. ಜತ್ತಿ ಪ್ರೌಢಶಾಲೆ ಮತ್ತು ಪಿಯು ಕಾಲೇಜ್, ಬಬಲೇಶ್ವರದ ಸರ್ಕಾರಿ ಐಟಿಐ ಕಾಲೇಜ್, ಬಸವನಬಾಗೇವಾಡಿಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಕೋಲ್ಹಾರದ ಸರ್ಕಾರಿ ಪ್ರೌಢ ಶಾಲೆ, ನಿಡಗುಂದಿಯ ಜಿವಿವಿಎಸ್ ಪಿಯು ಕಾಲೇಜ್, ಮುದ್ದೇಬಿಹಾಳದ ಎಂಜಿವಿಸಿ ಕಾಲೇಜ್, ತಾಳಿಕೋಟಿಯ ಎಸ್.ಕೆ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ತರಬೇತಿ ಆಯೋಜಿಸಲಾಗಿದೆ. ಮೊದಲ ಹಂತದಲ್ಲಿ ಚುನಾವಣೆ ನಡೆಯುವ ತಾಲೂಕುಗಳಾದ ವಿಜಯಪುರ, ತಿಕೋಟಾ, ಬಬಲೇಶ್ವರ, ಬಸವನ ಬಾಗೇವಾಡಿ, ಕೋಲ್ಹಾರ, ನಿಡಗುಂದಿ, ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕುಗಳಲ್ಲಿ ಈಗಾಗಲೇ ಮತಗಟ್ಟೆ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.