ಸಜ್ಜೆ ಬೆಳೆ ಮೌಲ್ಯವರ್ಧನೆ ಮಾಡಿ

hn-16-3
Published on

ವಿಜಯಪುರ : ಸಜ್ಜೆ ಬೆಳೆ ಅತ್ಯಂತ ನಿರ್ಲಕ್ಷಿತ ಬೆಳೆಯಾಗಿದ್ದು, ಮಾರುಕಟ್ಟೆಯಲ್ಲಿ ಹೆಚ್ಚಿನ ದರ ಸಿಗದಿದ್ದಕ್ಕೆ ರೈತರು ಆಸಕ್ತಿವಹಿಸುತ್ತಿಲ್ಲ. ಸಜ್ಜೆಯನ್ನು ಸಾವಯವದಲ್ಲಿ ಬೆಳೆದು ಮೌಲ್ಯವರ್ಧನೆ ಮಾಡಿ ಅಧಿಕ ಬೆಲೆಗೆ ಮಾರಾಟ ಮಾಡುವ ಮೂಲಕ ಲಾಭಗಳಿಸಬೇಕು ಎಂದು ಕೃಷಿ ಮಹಾವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ.ಆರ್. ಬಿ.ಬೆಳ್ಳಿ ಹೇಳಿದರು.

ಹೊರವಲಯ ಹಿಟ್ನಳ್ಳಿಯಲ್ಲಿರುವ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಜ್ಜೆ ಬೆಳೆ ಉತ್ಪಾದನೆಯಲ್ಲಿ ತಾಂತ್ರಿಕತೆ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಜ್ಞಾನಿ ಬಿ.ಕೆ.ಅಠೋನಿ ಮಾತನಾಡಿ, ವಿಪಿಎಂಎಚ್-7 ಹಾಗೂ ವಿಪಿಎಂವಿ-9 ಸಜ್ಜೆ ತಳಿಯನ್ನು ರೈತರಿಗಾಗಿ ಸಂಶೋಧಿಸಲಾಗಿದೆ. ಹೆಗಡಿಹಾಳ, ಕಿರೇಸೂರ ಹಾಗೂ ಕಲಗುರ್ಕಿ ಗ್ರಾಮಗಳನ್ನು ಆಯ್ಕೆಮಾಡಿ ಅವರ ಕ್ಷೇತ್ರದಲ್ಲಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದೆ. ಅವರಿಗೆ ಸಜ್ಜೆಬೆಳೆ ಉತ್ಪಾದನೆ ಕುರಿತು ತರಬೇತಿ ನೀಡಲಾಗುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎಸ್.ಬಿ.ಕಲಘಟಗಿ ಮಾತನಾಡಿ, ಸಜ್ಜೆಯ ಬೆಳೆಯನ್ನು ಏಕಬೆಳೆಯಾಗಿ ಬೆಳೆಯದೆ ಅಂತರ ಬೇಸಾಯದಲ್ಲಿ ಬೆಳೆಯಬೇಕು. ಎರಡು ಸಾಲು ಸಜ್ಜೆ ಹಾಗೂ ಒಂದು ಸಾಲು ತೊಗರಿ ಬೆಳೆಯಬೇಕು. ನಂತರ ಸಜ್ಜೆ ಕಟಾವಾದ ಮೇಲೆ ಅದರ ದಂಟನ್ನು ನಡುವೆ ಸಾಲುಗಳಲ್ಲಿ ಹಾಕುವುದರಿಂದ ಮಣ್ಣಲ್ಲಿ ಸಾವಯವ ಅಂಶ ಹೆಚ್ಚಾಗುತ್ತದೆ ಎಂದರು.

ಸಹ ಸಂಶೋಧನಾ ನಿರ್ದೇಶಕ ಡಾ.ಅಶೋಕ ಸಜ್ಜನ ಮಾತನಾಡಿ, ಅಧಿಕ ಪೋಷಕಾಂಶಗಳನ್ನು ಹೊಂದಿರುವ ತಳಿಗಳ ಮಹತ್ವದ ಬಗ್ಗೆ ತಿಳಿಸಿದರು. ಡಾ.ಶ್ರೀಶೈಲ ಕರಭಂಟನಾಳ, ಡಾ.ಬಸಮ್ಮ ಕುಂಬಾರ, ಡಾ.ಕಾಶೀಬಾಯಿ ಖ್ಯಾಡಗಿ, ಡಾ.ಎಂ.ಎಸ್. ಶಿರಹಟ್ಟಿ, ಡಾ. ಪಿ.ಎಸ್.ಪತ್ತಾರ, ತುಕಾರಾಮ ಚಲವಾದಿ, ರಾಮಣ್ಣ ಯಳಗತ್ತಿ, ರಾಮಸಿಂಗ ಲಮಾಣಿ, ಪರಶುರಾಮ ದಳವಾಯಿ ಹಾಗೂ ರೈತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net