

ವಿಜಯಪುರ: ಕೇಂದ್ರ ಸರ್ಕಾರದ ನಾಗರಿಕತ್ವ ಸಂಶೋಧನ ಅಧಿನಿಯಮ ಸಮರ್ಪಕವಾಗಿದ್ದು, ಅದನ್ನು ವಿರೋಧಿಸುವ ಮತ್ತು ಸಮಾಜದಲ್ಲಿ ಬಿರುಕು ಮೂಡಿಸಲು ಯತ್ನಿಸುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜನ ಜಾಗೃತಿ ವೇದಿಕೆ ಪದಾಧಿಕಾರಿಗಳು ಹೆಚ್ಚುವರಿ ಪ್ರಭಾರ ಜಿಲ್ಲಾಧಿಕಾರಿ ಡಾ.ಔದ್ರಾಮ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಸಮಿತಿ ಪ್ರಮುಖ ಪ್ರತೀಕ ಪೀರಾಪುರ ಮಾತನಾಡಿ, ನಾಗರಿಕತ್ವ ಸಂಶೋಧನ ಅಧಿನಿಯಮದಿಂದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪ್ಘಾನಿಸ್ತಾನದಿಂದ ನಿರಾಶ್ರಿತರಾಗಿ ಭಾರತಕ್ಕೆ ಬಂದಿರುವ ಅಲ್ಪಸಂಖ್ಯಾತ ಹಿಂದೂಗಳು ಮತ್ತು ಸಿಕ್, ಬೌದ್ಧ, ಜೈನ್, ಪಾರಸಿ, ಮತ್ತು ಕ್ರೈಸ್ತರಿಗೆ ನ್ಯಾಯ ದೊರಕಲಿದೆ. ಈ ಅಧಿನಿಯಮದಿಂದ ದೇಶದ ಮುಸಲ್ಮಾನರ ಯಾವುದೇ ರೀತಿಯ ಅಧಿಕಾರವು ಕಡಿಮೆಯಾಗುವುದಿಲ್ಲ ಎಂದು ಸ್ಪಷ್ಟವಾಗಿ ವಿವರಿಸಿದ ನಂತರವೂ ಕೆಲವರು ಧಾರ್ಮಿಕ ಆಧಾರದಲ್ಲಿ ವೈಮನಸ್ಸು ನಿರ್ಮಾಣ ಮಾಡುತ್ತಿದ್ದಾರೆ. ಅಂಥರವ ಮೇಲೆ ಕ್ರಮ ಕೈಗೊಳ್ಳಬೇಕೆಂದರು.
ಕಾಂಗ್ರೆಸ್ ಆಡಳಿತ ಕಾಲದಲ್ಲಿ ಮಾಡಿದ ಧಾರ್ಮಿಕ ಅಸಮಾನತೆಯ ಆಧಾರದಲ್ಲಿನ ‘ಸಚ್ಚರ ಆಯೋಗ’ವನ್ನು ಅನ್ವಯಗೊಳಿಸಿ ಕೇವಲ ಮುಸಲ್ಮಾನರಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗಿತ್ತು, ಇದರ ಕಡೆಗೆ ನೋಡಿ ಏಕೆ ಕಣ್ಣು ಮುಚ್ಚಿಕೊಳ್ಳಲಾಗುತ್ತಿದೆ? ಮೊದಲು ‘ಸಚ್ಚರ ಆಯೋಗ’ದ ಶಿಫಾರಸ್ಸನ್ನು ರದ್ದುಪಡಿಸಬೇಕು ಎಂದರು.
1990 ರಲ್ಲಿ ಜಿಹಾದಿ ಮತಾಂಧರು ಕಾಶ್ಮೀರಿ ಹಿಂದೂಗಳ ಮೇಲೆ ಅಪರಿಮಿತ ಅತ್ಯಾಚಾರಗಳನ್ನು ಮಾಡಿ 90 ಸಾವಿರ ಹಿಂದೂಗಳನ್ನು ವಧೆ ಮಾಡಿದರು ಹಾಗೂ ಅವರ ಅನೇಕ ದೇವಸ್ಥಾನಗಳನ್ನು, ಭೂಮಿ, ಮನೆ, ಸಂಪತ್ತು ಇತ್ಯಾದಿಗಳನ್ನು ಬಲವಂತದಿಂದ ವಶಪಡಿಸಿಕೊಂಡು ಉಳಿದ ನಾಲ್ಕುವರೆ ಲಕ್ಷಕ್ಕಿಂತಲೂ ಹೆಚ್ಚು ಹಿಂದೂಗಳನ್ನು ಕಾಶ್ಮೀರ ಕಣಿವೆಯಿಂದ ಹೊರದಬ್ಬಿದ್ದರು. ಈ ರೀತಿಯಲ್ಲಿ ತಮ್ಮದೇ ದೇಶದಲ್ಲಿ ಕಾಶ್ಮೀರಿ ಹಿಂದೂಗಳಿಗೆ ನಿರಾಶ್ರಿತರಾಗಬೇಕಾಯಿತು. ಜ.19, 1990 ರಂದು ಘಟಿಸಿದ ಈ ಘಟನೆಗೆ ಈಗ 30 ವರ್ಷಗಳಾಯಿತು. ಆದರೆ ಇದುವರೆಗೆ ಈ ನಿರಾಶ್ರಿತ ಹಿಂದೂಗಳಿಗೆ ಪುನರ್ವಸತಿಯ ವ್ಯವಸ್ಥೆ ಆಗಿಲ್ಲ. ಅವರು ಇಂದು ಕೂಡ ನ್ಯಾಯದಿಂದ ವಂಚಿತರಾಗಿದ್ದಾರೆ. ಆದ್ದರಿಂದ ಕಾಶ್ಮೀರದಲ್ಲಿ ಹಿಂದೂಗಳ ಪುನರ್ವಸತಿ ಮಾಡಿ, ಅವರಿಗೆ ತಮ್ಮದೇ ಜನ್ಮಭೂಮಿಯಲ್ಲಿ ಸ್ಥಿರವಾಗಿ ನೆಲೆಸಲು ಅಲ್ಲಿ ಭದ್ರತೆಯ ವಾತಾವರಣವನ್ನು ನಿರ್ಮಾಣ ಮಾಡಿಕೊಟ್ಟು, ಈ ಯೋಜನೆಯನ್ನು ನಿರ್ಧಿಷ್ಟ ಸಮಯದಲ್ಲಿ ಪೂರ್ಣಗೊಳಿಸಬೇಕು ಎಂದು ಸಹ ಒತ್ತಾಯಿಸಲಾಯಿತು.
ಮುಖಂಡರಾದ ಸಂತೋಷ ವಿಶ್ವಕರ್ಮ, ಶ್ಯಾಮ ಅಮ್ಮಾಜಿಗೋಳ, ರಘು ಕದಮ, ಸಾಗರ ದಳವಾಯಿ, ವೆಂಕಟರಮಣ ನಾಯ್ಕ ಮತ್ತಿತರರಿದ್ದರು.