

ವಿಜಯಪುರ: ಎಲ್ಲವೂ ದೇವರು ಮಾಡುತ್ತಾನೆ ಎಂದು ಕುಳಿತರೆ ಸಾಧನೆ ಅಸಾಧ್ಯ. ಭಗವಂತನ ಅನುಗ್ರಹ, ರಕ್ಷಣೆಯ ಪ್ರಾರ್ಥನೆಯೊಂದಿಗೆ ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಇಲ್ಲಿನ ಬಿಎಲ್‌ಡಿಇ ಸಂಸ್ಥೆಯ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಸ್ವ- ಸಹಾಯ ಸಂಘಗಳ ಸಮಾವೇಶ ಹಾಗೂ ವಿವಿಧ ಸೌಲಭ್ಯ ವಿತರಣಾ ಕಾರ್ಯಕ್ರಮವನ್ನು ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ಭಗವಂತ ನಾನಾ ರೂಪದಲ್ಲಿ ಬಂದು ಸಹಾಯ ಮಾಡುತ್ತಾನೆ, ಆದರೆ ಆತನೇ ಬಂದು ಕೈ ತುತ್ತು ಉಣಬಡಿಸುವುದಿಲ್ಲ, ನಮ್ಮ ಊಟವನ್ನು ನಾವೇ ಸಿದ್ಧಪಡಿಸಿಕೊಳ್ಳಬೇಕು. ಒಳ್ಳೆಯ ಮಣ್ಣು, ಮಳೆ, ಬೀಜಗಳನ್ನು ದೇವರು ಕರುಣಿಸಿದ್ದಾನೆ. ಅದೆನ್ನಲ್ಲವನ್ನೂ ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ನಡೆಸಬೇಕು. ಒಳ್ಳೆಯ ಸಲು, ಒಳ್ಳೆಯ ಮಳೆ ಕೊಡುವಂತೆ ದೇವರಲ್ಲಿ ಪ್ರಾರ್ಥಿಸಬೇಕು, ಆತನಲ್ಲಿ ರಕ್ಷಣೆಗೆ ಮೊರೆ ಹೋಗಬೇಕು, ಎಲ್ಲವೂ ದೇವರೇ ಮಾಡಲಿ ಎಂದು ಕುಳಿತರೆ ಸಾಧ್ಯವಾಗದು ಎಂದರು.
ಮಹಿಳಾ ಸಬಲೀಕರಣ, ಜನರನ್ನು ಸ್ವಾವಲಂಬಿ ಹಾಗೂ ಆರ್ಥಿಕ ಸಶಕ್ತರನ್ನಾಗಿ ಮಾಡುವುದೇ ನಮ್ಮ ಆದ್ಯ ಧ್ಯೇಯ, ಇಂದು ಅನೇಕರು ಬಡತನದಲ್ಲಿಯೇ ಉಳಿದಿದ್ದು, ಅನೇಕರು ಶ್ರೀಮಂತರಾಗಿಯೇ ಉಳಿದಿದ್ದಾರೆ. ಹೀಗಾಗಿ ಬಡವರು ಮತ್ತು ಶ್ರೀಮಂತರ ನಡುವಿನ ಬೆಸುಗೆಯಾಗಿ ಇಬ್ಬರನ್ನು ಒಟ್ಟಿಗೆ ತರುವ ಕಾರ್ಯದಲ್ಲಿ ನಮ್ಮ ಟ್ರಸ್ಟ್ ತೊಡಗಿಸಿಕೊಂಡಿದೆ. ಬಡವರು ಅನಾಥರಾಗಬಾರದು, ಸರ್ಕಾರ ಬಡವರಿಗಾಗಿ ತರುವ ಅನೇಕ ಕಾರ್ಯಕ್ರಮಗಳು ಅವರಿಗೆ ತಲುಪುವುದೇ ಇಲ್ಲ, ತಿಳಿವಳಿಕೆಯ ಕೊರತೆಯಿಂದಾಗಿ ಸೌಲಭ್ಯಗಳು ಮುಟ್ಟುವುದಿಲ್ಲ. ಹಕ್ಕು ಬದ್ಧವಾಗಿ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಮಹಿಳಾ ಶೋಷಣೆ, ಅನೇಕ ಮನೆಯಲ್ಲಿ ಅನುಭವಿಸುವ ತೊಂದರೆ ತಪ್ಪಿಸಿ ಮಹಿಳೆಯರಿಗೆ ನವ ಬದುಕು ಕಲ್ಪಿಸಬೇಕು ಎಂಬ ಸಂಕಲ್ಪ ನಮ್ಮದು. ಸ್ತ್ರೀ ಸಬಲೀಕರಣದ ಜತೆಗೆ ಕೆರೆಗಳ ಅಭಿವೃದ್ಧಿ, ಗ್ರಾಮಗಳ ಪ್ರಗತಿಗೆ ಒತ್ತು ನೀಡಲಾಗುತ್ತಿದೆ ಎಂದರು.
ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಎಂ.ಬಿ. ಪಾಟೀಲ ಮಾತನಾಡಿ, ಸರ್ಕಾರ ಮಾಡದಂತಹ ಕೆಲಸವನ್ನು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಭೂತಪೂರ್ವವಾಗಿ ಸೇವಾ ಕಾರ್ಯ ಮಾಡುತ್ತಿದೆ. ಮಹಿಳಾ ಸಬಲೀಕರಣದ ಜತೆಗೆ ಕೆರೆಗೆ ಹೂಳೆತ್ತುವುದು, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಸೇರಿದಂತೆ ಅನೇಕ ಸಮಾಜಮುಖಿ ಸೇವಾ ಕಾರ್ಯ ಕೈಗೊಳ್ಳುತ್ತಿದೆ. ಈ ಭಾಗದಲ್ಲಿ ಹೈನುಗಾರಿಕೆಗೂ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಶ್ರದ್ಧಾ ಹೆಗ್ಗಡೆ ಮಾತನಾಡಿ, ಮಹಿಳೆ ಜ್ಞಾನಿಯಾಗಿ, ಸಂಘಟನೆಯಾಗದೇ ಇದ್ದರೆ ಅವಳ ಪ್ರಗತಿ ಅಸಾಧ್ಯ. ಮನೆಯಲ್ಲಿ ಎಲ್ಲ ಪಾತ್ರ ನಿಭಾಯಿಸಿ, ಮಕ್ಕಳಿಗೆ ವಿದ್ಯೆ, ಆಹಾರ, ಸಂಸ್ಕಾರವನ್ನು ಕೊಡುವವಳು ಮಹಿಳೆ ಎಂದರು.
ಇದೇ ವೇಳೆ ಅಂಗವಿಕಲರಿಗೆ ವ್ಹೀಲ್‌ಚೇರ್, ವಿವಿಧ ಶಾಲೆಗಳಿಗೆ ಉಚಿತವಾಗಿ ಬೆಂಚ್ ವಿತರಣೆ, ಹಾಗೂ ಸ್ವ-ಸಹಾಯ ಸಂಘಗಳಿಗೆ ಸಹಾಯ ಧನದ ಚೆಕ್‌ನ್ನು ವಿತರಿಸಲಾಯಿತು.
ಶಾಸಕರಾದ ಡಾ. ದೇವಾನಂದ ಚವ್ಹಾಣ, ಸೋಮನಗೌಡ ಪಾಟೀಲ ಸಾಸನೂರ, ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಸುನಿತಾ ಚವ್ಹಾಣ, ವಿದ್ಯಾರಾಣಿ ತುಂಗಳ, ಡಾ. ಎಲ್.ಎಚ್. ಮಂಜುನಾಥ, ಶಿವರಾಯಪ್ರಭು, ಗಣೇಶ ಮರಾಠೆ ಇತರರು ಉಪಸ್ಥಿತರಿದ್ದರು.
ಎಂ.ಬಿ ಪಾಟೀಲ ಉ-ಕ ಭಾಗದ ನಜೀರ್‌ಸಾಬ್
ನಜೀರ್ ಸಾಬ್ ಅವರನ್ನು ‘ನೀರು ಮಂತ್ರಿ’ ಎಂದೇ ಕರೆಯುತ್ತಿದ್ದರು, ಉತ್ತರ ಕರ್ನಾಟಕ ಭಾಗದಲ್ಲಿ ಜಲಸಂಪನ್ಮೂಲ ಸಚಿವರಾಗಿ ಎಂ.ಬಿ. ಪಾಟೀಲರು ದೊಡ್ಡ ಕೊಡುಗೆ ನೀಡಿದ್ದಾರೆ ಎಂಬುದನ್ನು ತಿಳಿದುಕೊಂಡೆ, ಅದಕ್ಕಾಗಿ ಅವರಿಗೆ ನಾನು ಹೊಸ ಶೀರ್ಷಿಕೆ ಕೊಡುವೆ ಎಂದು ಎಂ.ಬಿ. ಪಾಟೀಲರು ಉತ್ತರ ಕರ್ನಾಟಕ ಭಾಗದ ನಜೀರ್ ಸಾಬ್ ಎಂದು ಹೊಸ ಬಿರುದು ನೀಡುವ ಮೂಲಕ ಡಿ. ವೀರೇಂದ್ರ ಹೆಗ್ಗಡೆ ಅವರು ಎಂ.ಬಿ. ಪಾಟೀಲರ ಕಾರ್ಯವನ್ನು ಶ್ಲಾಸಿದರು.