ವೆಲೊಡ್ರೊಮ್ ಕಾಮಗಾರಿ ಪುನಾರಂಭಿಸಿ

vjp 13-2
Published on

ವಿಜಯಪುರ: ನನೆಗುದಿಗೆ ಬಿದ್ದಿರುವ ಸೈಕ್ಲಿಂಗ್ ವೆಲೊಡ್ರೊಮ್ ಕಾಮಗಾರಿ ಪುನಾರಂಭಿಸಲು ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮಂಗಳವಾರ ಸಿಂಥೆಟಿಕ್ ಟ್ರಾೃಕ್ ಮತ್ತು ವಿವಿಧ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು.

ವೆಲೊಡ್ರೊಮ್ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಈ ಭಾಗರ ಸೈಕ್ಲಿಸ್ಟ್‌ಗಳ ಅನುಕೂಲಕ್ಕಾಗಿ ಕೂಡಲೇ ಕಾಮಗಾರಿ ಕೈಗೊಳ್ಳಲು ಆಯುಕ್ತರಿಗೆ ಪತ್ರದ ಮೂಲಕ ಮನವರಿಕೆ ಮಾಡಲು ತಿಳಿಸಿದರು.

ಈಗಾಗಲೇ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಿಂಥೆಟಿಕ್ ಟ್ರಾೃಕ್‌ನ ಶೇ.100 ರಷ್ಟು ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿದೆ. 5 ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ. ಅದರಂತೆ ಕೆಬಿಜೆಎನ್‌ಎಲ್ ಮೂಲಕ ಹೆಚ್ಚುವರಿಯಾಗಿ ಕ್ರೀಡಾ ಸಾಮಗ್ರಿಗಳ ಖರೀದಿ ಮತ್ತು ಸ್ಪಿಂಕ್ಲರ್ ಅಳವಡಿಕೆಗೆ 1.31 ಕೋಟಿ ರೂ. ಮಂಜೂರಾಗಿದ್ದು ಆದ್ಯತೆ ಮೇರೆಗೆ ಅವಶ್ಯಕ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.

ಕ್ರೀಡಾಂಗಣ ವ್ಯಾಪ್ತಿಯಲ್ಲಿ 2 ಸಿಂಥೆಟಿಕ್ ವಾಲಿಬಾಲ್ ಅಂಕಣಗಳ ಶೇ.80 ರಷ್ಟು ಭೌತಿಕ ಕಾಮಗಾರಿಗಳು ಪೂರ್ಣಗೊಂಡಿದ್ದು, 52 ಲಕ್ಷ ರೂ.ಗಳಲ್ಲಿ ನಿರ್ಮಿಸಲಾದ ಈ ಅಂಕಣಗಳಿಗೆ ಹೆಚ್ಚುವರಿಯಾಗಿ ಅವಶ್ಯಕತೆ ಇರುವ 2 ಲಕ್ಷ ರೂ.ಗಳನ್ನು ಕನಕದಾಸ ಬಡಾವಣೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ‘ಇನ್ ಡೋರ್ ಸ್ಟೇಡಿಯಂ’ ಉಳಿತಾಯ ಹಣದಲ್ಲಿ ಮರು ಹೊಂದಾಣಿಕೆ ಮಾಡಿಕೊಳ್ಳುವಂತೆ ಸೂಚಿಸಿದರು.

ನಗರದ ಕನಕದಾಸ ಬಡಾವಣೆಯಲ್ಲಿ 220 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈಜುಗೊಳ ಶೇ.80 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು ನವೆಂಬರ್ ಅಂತ್ಯಕ್ಕೆ ಎಲ್ಲ ಕಾಮಗಾರಿ ಪೂರ್ಣಗೊಳಿಸಬೇಕು. ಭವಿಷ್ಯದಲ್ಲಿ ಜಿಲ್ಲಾಡಳಿತ ಮೂಲಕವೇ ಇದರ ಸಮಗ್ರ ನಿರ್ವಹಣೆಯಾಗುವಂತೆ ನೋಡಿಕೊಳ್ಳಬೇಕು. ಆದ್ಯತೆ ಮೇಲೆ ಮಹಿಳಾ ವ್ಯವಸ್ಥಾಪಕರನ್ನು ನೇಮಿಸಿಕೊಳ್ಳಲು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದರು.

ಕ್ರೀಡಾಂಗಣದ ನಿರ್ವಹಣೆಗೆ ಅನುಕೂಲವಾಗುವಂತೆ ಕ್ರೀಡಾಂಗಣ ವ್ಯಾಪ್ತಿಯ ಮಳಿಗೆಗಳ ಮಾಲೀಕರು ಬಾಕಿ ಉಳಿಸಿಕೊಂಡಿರುವ ಬಾಡಿಗೆ ಹಣವನ್ನು ತಕ್ಷಣ ಪಾವತಿಯಾಗುವ ನಿಟ್ಟಿನಲ್ಲಿ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಡಿವೈಎಸ್‌ಪಿ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಅಭಿಯಂತರರನ್ನು ಒಳಗೊಂಡ ಸಮಿತಿ ರಚಿಸಿ ಬಾಕಿ ಹಣ ವಸೂಲಾತಿ ವರದಿ ಸಲ್ಲಿಸುವಂತೆ ಸೂಚಿಸಿದರು.

ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿ ಎಸ್.ಜಿ. ಲೋಣಿ, ಮಹಾನಗರಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತರ ಬಿ.ಎಚ್. ಕಿರೇಸೂರ, ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಮಜೂಮದಾರ, ಯು.ಎಸ್. ಗಾಣಿಗೇರ, ವೈ .ಎಂ. ಹಳ್ಳಿ, ಎಸ್.ಹರೀಶ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net