ದೊರೆಸ್ವಾಮಿ ನಕಲಿ ಸ್ವಾತಂತ್ರ್ಯ ಹೋರಾಟಗಾರ

basangouda patil
Published on

ವಿಜಯಪುರ: ದೊರೆಸ್ವಾಮಿ ನಕಲಿ ಸ್ವಾತಂತ್ರ್ಯ ಹೋರಾಟಗಾರ, ಪಾಕಿಸ್ತಾನ ಏಜೆಂಟ್‌ರಂತೆ ಮಾತನಾಡುತ್ತಾರೆ. ಈಗ ಎಲ್ಲಿದ್ದಾನೆ ಆ ಮುತ್ಯಾ? ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇನ್ನು ಮುಂದೆ ದೇಶ ವಿರೋಧಿ ಹೇಳಿಕೆ ನಡೆಯಲ್ಲ. ಇನ್ನೇನಿದ್ದರೂ ಗುಂಡೇಟು. ಮೇಲೆ ಕಳುಹಿಸುವುದೊಂದೇ ದಾರಿ ಎಂದು ಮಂಗಳವಾರ ಸುದ್ದಿಗಾರರ ಪ್ರಶ್ನೆಗಳಿಗೆ ಖಾರವಾಗಿ ಪ್ರತಿಕ್ರಿಯಿಸಿದರು.
ಪಾಕಿಸ್ತಾನದ ಜತೆ ಕೈ ಜೋಡಿಸಿದರೆ ಕೈ ಕತ್ತರಿಸುವುದಾಗಿ ಆರ್‌ಎಸ್‌ಎಸ್‌ನವರು ಹೇಳುತ್ತಿದ್ದರು. ಪ್ರಧಾನಿ ಮೋದಿ ಪಾಕ್ ಪ್ರಧಾನಿಯನ್ನು ತಬ್ಬಿಕೊಂಡು ಬಂದಿದ್ದಾರಲ್ಲ ಅವರ ರುಂಡ ಕತ್ತರಿಸಬೇಕಾ? ಎಂಬ ಸಿಎಂ ಇಬ್ರಾಹಿಂ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಯತ್ನಾಳ, ಪಾಕಿಸ್ತಾನ ನಮ್ಮ ವೈರಿ ಎಂದು ಭಾರತ ತಿಳಿದುಕೊಂಡಿಲ್ಲ. ಅದು ನಮ್ಮ ಮುಂದಿನ ಬಚ್ಚಾ. ನಮ್ಮಿಂದ ಹುಟ್ಟಿದ ರಾಷ್ಟ್ರ ಅದು. ನಮ್ಮ ಅಕ್ರಮದಿಂದ ಹುಟ್ಟಿದ ರಾಷ್ಟ್ರ. ನೆಹರು ಸ್ವಾರ್ಥದಿಂದಾಗಿ ಪಾಕಿಸ್ತಾನ ರಚನೆಯಾಗಿದೆ ಎಂದರು.
ಅಟಲ್ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನಕ್ಕೆ ಬಸ್‌ನಲ್ಲಿ ಹೋಗಿ ಬಂದಿದ್ದರು. ಅವರು ನೆರೆ ರಾಷ್ಟ್ರದ ಜತೆ ಸೌಹಾರ್ದಯುತ ಸಂಬಂಧ ಹೊಂದಬೇಕೆಂದಿದ್ದರು. ಅದೇ ತೆರನಾಗಿ ಮೋದಿ ಅವರು ಷರೀಫ್ ಜನ್ಮದಿನಕ್ಕೆ ಶುಭ ಕೋರಿ ಬಂದಿದ್ದಾರೆಂದು ಯತ್ನಾಳ ಸಮರ್ಥಿಸಿಕೊಂಡರು.
ಬಿಜೆಪಿಯ ಪೂರ್ವಜರಾರೂ ಸ್ವಾತಂತ್ರೃ ಹೋರಾಟದಲ್ಲಿ ಇರಲಿಲ್ಲ ಎಂಬ ಪ್ರತಿಪಕ್ಷ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಇದ್ದರಾ? ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಇದ್ದರಾ? ಎಂದು ಮರು ಪ್ರಶ್ನೆ ಹಾಕಿದರು. ಎಲ್ಲರೂ ಹೋರಾಟ ಮಾಡಿದ್ದಾರೆ. ವಾಜಪೇಯಿ ಅವರೂ ಮಾಡಿದ್ದಾರೆ. ಆದರೆ, ಸಿದ್ಧಾಂತ ಬೇರೆ ಇದ್ದವು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net