

ವಿಜಯಪುರ: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಶುಕ್ರವಾರ ತಡರಾತ್ರಿ ಹಾಗೂ ಶನಿವಾರ ಮುಂಜಾನೆ ಭಾರಿ ಮಳೆಯಾಗಿದೆ. ಜಿಲ್ಲೆಯಲ್ಲಿ ಸಿಡಿಲಿಗೆ ಒಂದು ಆಡು, ಎತ್ತು ಹಾಗೂ ಮೂರು ಕುರಿ ಮೃತಪಟ್ಟಿದ್ದರೆ, 135 ಮನೆಗಳು ಭಾಗಶಃ ಹಾನಿಗೊಳಗಾಗಿವೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಸಿಂದಗಿ, ತಾಳಿಕೋಟೆ, ಆಲಮೇಲ ಭಾಗದಲ್ಲಿ ಹೆಚ್ಚಾಗಿ ಮಳೆಯಿಂದ ಹಾನಿ ಆಗಿದೆ.
ಜಿಲ್ಲೆಯ ಎಲ್ಲೆಲ್ಲಿ ಹಾನಿ
ಜಿಲ್ಲೆಯ ವಿವಿಧೆಡೆ ಸಿಡಿಲು, ಗುಡುಗು ಸಹಿತ ಮಳೆ ಆಗಿದ್ದು, ಅಪಾರ ಹಾನಿ ಆಗಿದೆ. ವಿಜಯಪುರ, ಬಬಲೇಶ್ವರ, ತಿಕೋಟಾ, ಬಸವನ ಬಾಗೇವಾಡಿ ತಾಲೂಕು ವ್ಯಾಪ್ತಿ ತಲಾ ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಇನ್ನೂ ಕೊಲ್ಹಾರ ವ್ಯಾಪ್ತಿಯಲ್ಲಿ 10 ಮನೆಗಳು, ನಿಡಗುಂದಿ 21, ದೇವರ ಹಿಪ್ಪರಗಿ 16, ಮುದ್ದೇಬಿಹಾಳ 21 ಮನೆ ಹಾನಿಯಾಗಿದ್ದು, ಸಿಡಿಲಿಗೆ ಒಂದು ಆಡು ಮೃತಪಟ್ಟಿದೆ. ತಾಳಿಕೋಟೆ ವ್ಯಾಪ್ತಿ 15 ಮನೆಗಳು, ಇಂಡಿ 11, ಸಿಂದಗಿ 33 ಮನೆಗಳಿಗೆ ಹಾನಿಯಾಗಿದ್ದು, ಎರಡು ಕುರಿ ಹಾಗೂ ಎತ್ತು ಸಿಡಿಲಿಗೆ ಬಲಿ ಆಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಜಿಲ್ಲಾದ್ಯಂತ 34.58 ಮಿ.ಮೀ. ಮಳೆ
ಜಿಲ್ಲಾದ್ಯಂತ ಭಾರಿಮಳೆಯಾಗಿದ್ದು, ಒಟ್ಟು ಸರಾಸರಿ 34.58 ಮಿ.ಮೀ. ಮಳೆಯಾಗಿದೆ. ಅದರಲ್ಲಿ ಬಸವನ ಬಾಗೇವಾಡಿ 44.2 ಮಿ.ಮೀ, ಮನಗೂಳಿ 55.0, ಆಲಮಟ್ಟಿ 27.0, ಹೂವಿನ ಹಿಪ್ಪರಗಿ 64.8, ಅರೇಶಂಕರ 36.2, ಮಟ್ಟಿಹಾಳ 26.2, ವಿಜಯಪುರ 53.4, ನಾಗಠಾಣ 6.3, ಭೂತನಾಳ 28.8, ಹಿಟ್ನಳ್ಳಿ 60.6, ತಿಕೋಟಾ 25.2, ಮಮದಾಪುರ 25.2, ಕುಮಟಗಿ 31.4, ಕನ್ನೂರ 8.3, ಬಬಲೇಶ್ವರ 26.8, ಇಂಡಿ 16.5, ನಾದ ಬಿ.ಕೆ. 28.3, ಅಗರಖೇಡ 24.1, ಹೋರ್ತಿ 11.4, ಹಲಸಂಗಿ 16.0, ಚಡಚಣ 15.0, ಝಳಕಿ 9.0, ಮುದ್ದೆಬಿಹಾಳ 43.0, ನಾಲತವಾಡ 58.4, ತಾಳಿಕೋಟೆ 65.1, ಢವಳಗಿ 48.6, ಸಿಂದಗಿ 38.0, ಆಲಮೇಲ 79.5, ಸಾಸಾಬಾಳ 13.0, ರಾಮನಹಳ್ಳಿ 36.0, ಕಡ್ಲೆವಾಡ 42.0, ದೇವರ ಹಿಪ್ಪರಗಿ 60.0, ಕೊಂಡಗೂಳಿ 58.2 ಮಿ.ಮೀ. ಮಳೆಯಾಗಿದೆ ಎಂದು ಜಿಲ್ಲಾ ಅಂಕಿ-ಸಂಖ್ಯೆ ಇಲಾಖೆ ಮಾಹಿತಿ ನೀಡಿದೆ.
ಬೆಳೆಗಾರರಿಗೆ ಸಂಕಷ್ಟ ತಂದ ವರುಣ
ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಇದರಿಂದ ಈರುಳ್ಳಿ ಬೆಳೆಗಾರರಲ್ಲಿ ಕಣ್ಣೀರು ತರಿಸಿದಂತಾಗಿದೆ. ಸತತ ಮಳೆಯಾಗುತ್ತಿರುವುದರಿಂದ ಈರುಳ್ಳಿ ಬೆಳೆದ ರೈತರು ಈರುಳ್ಳಿ ಕಟಾವು ಮಾಡಲಾಗದೆ ಹೊಲಗಳಲ್ಲಿಯೇ ಹಾಕಿ ಬಿಟ್ಟಿದ್ದಾರೆ.ಇದರಿಂದಾಗಿ ಹೊಲಗಳಲ್ಲಿಯೇ ಈರುಳ್ಳಿ ಕೊಳೆಯುವ ಸ್ಥಿತಿ ನಿರ್ಮಾಣಗೊಂಡಿದೆ. ಇನ್ನೊಂದೆಡೆ ಅಧಿಕ ಮಳೆಯಿಂದಾಗಿ ತೊಗರಿ ಇಳುವರಿ ಕುಸಿಯುವ ಭೀತಿ ಕಾಡುತ್ತಿದೆ. ಇನ್ನೂ ದ್ರಾಕ್ಷಿ ಬೆಳೆಗಾರರು ಕೂಡ ಒಣದ್ರಾಕ್ಷಿಯನ್ನು ಮಾರಾಟ ಮಾಡಲಾಗದೆ ಚಿಂತಾಜನಕರಾಗಿದ್ದಾರೆ.