

ವಿಜಯಪುರ: ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಗುರುವಾರ ಪತ್ರಕರ್ತರು ಹಾಗೂ ಪೊಲೀಸ್ ತಂಡದ ನಡುವೆ ನಡೆದ ಪಂದ್ಯದಲ್ಲಿ ಪೊಲೀಸರ ತಂಡ ಜಯ ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಪೋಲಿಸ್ ತಂಡ ನಿಗದಿತ 10 ಓವರ್‌ಗಳಲ್ಲಿ 121 ರನ್ ಗಳಿಸಿತು.
ಪೊಲೀಸ್ ತಂಡದ ಪರವಾಗಿ ಮಾದು ದ್ಯಾಬೇರಿ ವೈಯಕ್ತಿಕ 66 ರನ್ ಗಳಿಸಿ ಮಿಂಚಿದರು. ನಂತರ ಬ್ಯಾಟಿಂಗ್ ಆರಂಭಿಸಿದ ಪತ್ರಕರ್ತರ ತಂಡ ಉತ್ತಮ ಆರಂಭ ಪಡೆಯಿತು. ಕೊನೆಗೆ 10 ಓವರ್‌ಗಳಲ್ಲಿ 102 ರನ್ ಗಳಿಸಿ ಸೋಲು ಅನುಭವಿಸಿತು. ಪತ್ರಕರ್ತರ ತಂಡ ಪರವಾಗಿ ‘ವಿಜಯವಾಣಿ’ ಜಾಹೀರಾತು ವಿಭಾಗದ ಸಿಬ್ಬಂದಿ ಅಮಿತ್ ಬೂದಿ ವೈಯಕ್ತಿಕ ಅರ್ಧಶತಕ ಗಳಿಸಿ ಮಿಂಚಿದರು.
ಬಳಿಕ ಪೊಲೀಸ್ ಅಧೀಕ್ಷಕ ಅನುಪಮ ಅಗರವಾಲ ಮಾತನಾಡಿ, ಆಟದಲ್ಲಿ ಸೋಲು ಗೆಲುವು ಸಹಜ ಎಂದರಲ್ಲದೆ, ಪತ್ರಕರ್ತರ ತಂಡದ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮ ಅರಸಿದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಸುಲೇಮಾನ್ ನದಾಫ್ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಚ್ಚೇಂದ್ರ ಲಂಬೂ ಮತ್ತಿತರರಿದ್ದರು.