ಕೃತಕ ಗರ್ಭಧಾರಣೆ ಯೋಜನೆ ಅನುಷ್ಠಾನಗೊಳಿಸಿ

VJP 18-2
Published on

ವಿಜಯಪುರ: ಕೇಂದ್ರ ಸರ್ಕಾರಿ ಜಾರಿಗೊಳಿಸಿದ ರಾಷ್ಟ್ರೀಯ ಕೃತಕ ಗರ್ಭಧಾರಣೆ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಾನುವಾರು ಕೃತಕ ಗರ್ಭಧಾರಣೆ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಸಂಸ್ಥೆಗಳಿಂದ ಜಾನುವಾರುಗಳ ಕೃತಕ ಗರ್ಭಧಾರಣೆಗಾಗಿ ಖರೀದಿಸಿದ ವೀರ್ಯ ನಳಿಕೆಗಳ ಬಗ್ಗೆ ಪರಿಶಿಲಿಸುತ್ತಾ, ಕೇಂದ್ರ ಸರ್ಕಾರ ಈ ಯೋಜನೆಯಡಿ ಜಾರಿಗೊಳಿಸಿದ ಅನುದಾನ ಸಮರ್ಪಕವಾಗಿ ಬಳಸಿಕೊಂಡು, ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚಿಸಿದರು.
ಕೃತಕ ಗರ್ಭಧಾರಣೆಯಿಂದ ಜಾನುವಾರುಗಳ ಮುಂಬರುವ ಪೀಳಿಗೆ ಉತ್ಕೃಷ್ಟವಾಗಬೇಕೆಂಬ ಉದ್ದೇಶದೊಂದಿಗೆ ಈ ಯೋಜನೆ ಜಾರಿಗೊಳಿಸಲಾಗಿದೆ. ತಾಲೂಕುವಾರು ಅನುದಾನ ಸಮರ್ಪಕ ಹಂಚಿಕೆ, ಯೋಜನೆಯ ಅನುಷ್ಟಾನ ಮತ್ತು ರೈತರಲ್ಲಿ ಸೂಕ್ತ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲು ಸೂಚಿಸಿದರು.
ವೀರ್ಯನಳಿಕೆಗಳ ಖರೀದಿ, ದ್ರವ ಸಾರಜನಕ ಖರೀದಿ, ಸಾಗಾಣಿಕೆ ವೆಚ್ಚ ಮತ್ತು ಸಂಬಂಧಪಟ್ಟ ಪರಿಕರಗಳ ಪಾರದರ್ಶಕ ರೀತಿಯಲ್ಲಿ ಖರೀದಿ ಮತ್ತು ಗುಣಮಟ್ಟದ ಬಗ್ಗೆ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ವೀರ್ಯನಳಿಕೆಗಳ ದರಗಳಲ್ಲಿ ಇರುವಂತಹ ವ್ಯತ್ಯಾಸಕ್ಕೆ ಅನುಗುಣವಾಗಿ ಅನುದಾನ ಬಳಸಬೇಕು. ಕೃತಕ ಗರ್ಭಧಾರಣೆ ಯೋಜನೆಯಿಂದಾಗುವ ಉಪಯೋಗ, ಹಸುಗಳಲ್ಲಿ ಹೋರಿಗಳಿಂದ ಹರಡಬಹುದಾದ ರೋಗ ನಿಯಂತ್ರಣಾ ಕ್ರಮಗಳು, ಗುರಿಗೆ ತಕ್ಕಂತೆ ಸಾಧನೆ, ದೇಶಿಯ ಆಕಳುಗಳ ಹಾಲು ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡುವ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿದರು.
ಜಿಲ್ಲಾ ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಿ. ವೇಣುಗೋಪಾಲ ಮಾತನಾಡಿ, ಕೇಂದ್ರ ಸರ್ಕಾರ 2019-20ನೇ ಸಾಲಿನಲ್ಲಿ ಈ ಯೋಜನೆ ಜಾರಿಗೊಳಿಸಿದೆ. ಈ ಹಿಂದೆ ಕೃತಕ ಗರ್ಭಧಾರಣಾ ಕಾರ್ಯವು ಪಶುಸಂಗೋಪನೆ ಮತ್ತು ಕೆಎಂಎ್ ಸಂಸ್ಥೆಯಿಂದ ನಡೆಯುತ್ತಿತ್ತು. ದೇಶಾದ್ಯಂತ ಶೇ. 30ರಷ್ಟು ಮಾತ್ರ ಜಾನುವಾರುಗಳು ಕೃತಕ ಗರ್ಭಧಾರಣೆಗೆ ಒಳಪಡುತ್ತಿದ್ದುದ್ದನ್ನು ಗಮನಿಸಿ ಈ ಯೋಜನೆ ಜಾರಿಗೊಳಿಸಿ ಕನಿಷ್ಟ ಶೇ.70ರಷ್ಟು ಜಾನುವಾರುಗಳಿಗೆ ಕೃತಕ ಗರ್ಭಧಾರಣೆಗೆ ಒಳಪಡಿಸುವ ಉದ್ದೇಶ ಹೊಂದಲಾಗಿದೆ. ಅತ್ಯಂತ ಕಡಿಮೆ ಸಾಧನೆಗೈದಿರುವ ರಾಷ್ಟ್ರದ 216 ಹಾಗೂ ಕರ್ನಾಟಕ ರಾಜ್ಯದ 17 ಜಿಲ್ಲೆಗಳಲ್ಲಿ ಈ ಯೋಜನೆ ಕ್ಲಷ್ಟರ್ ಮತ್ತು ಗ್ರಾಮ ಗುಚ್ಛ ಆಯ್ಕೆ ಆಧಾರದ ಮೇಲೆ ಅನುಷ್ಟಾನಗೊಳಿಸಲಾಗುತ್ತಿದೆ ಎಂದರು.
ಜಿಪಂ ಸಿಇಒ ಗೋವಿಂದ ರೆಡ್ಡಿ, ಪಶುಸಂಗೋಪನೆ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net