

ವಿಜಯಪುರ: ತೊಗರಿ ಖರೀದಿ ಕೇಂದ್ರ ಪ್ರಾರಂಭಿಸಿ ಯೋಗ್ಯ ದರ ನಿಗದಿ ಪಡಿಸಲು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವ ರೈತರು ಬುಧವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ಅರವಿಂದ ಕುಲಕರ್ಣಿ ಮಾತನಾಡಿ, ಪ್ರಾಕೃತಿಕ ವಿಕೋಪದಿಂದಾಗಿ ರೈತರ ಬೆಳೆ ಹಾನಿಯಾಗಿದೆ. ತೊಗರಿ ನೆರೆಗೆ ಕೊಚ್ಚಿಕೊಂಡು ಹೋಗಿದ್ದು ಇನ್ನುಳಿದಂತೆ ಹವಾಮಾನ ವೈಪರೀತ್ಯದಿಂದ ಹಾಳಾಗಿದೆ. ಅಲ್ಪ ಸ್ವಲ್ಪ ಉಳಿದ ತೊಗರಿ ಬೆಳೆ ಕಟಾವು ಮಾಡಲು ರೈತರು ಪ್ರಾರಂಭಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.50ರಷ್ಟು ತೊಗರಿ ರೈತರ ಕೈಸೇರಲಿದೆ. ಬಂದ ಅಲ್ಪ ಸ್ವಲ್ಪ ತೊಗರಿಯನ್ನಾದರೂ ಸರ್ಕಾರ ಯೋಗ್ಯ ದರದಲ್ಲಿ ಖರೀದಿಸಬೇಕು ಎಂದರು.
ಉಳುಮೆ ಪ್ರಾರಂಭದಿಂದ ಬೆಳೆ ಕಠಾವು ಆಗುವವರೆಗೆ ಎಲ್ಲ ಖರ್ಚು ವೆಚ್ಚಗಳನ್ನು ಗಣನೆಗೆ ತೆಗೆದುಕೊಂಡು ಬೆಲೆ ನಿಗದಿಪಡಿಸಬೇಕು. ಯೋಗ್ಯದರದಲ್ಲಿ ತೊಗರಿ ಖರೀದಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಸ್ವಲ್ಪ ಮಟ್ಟಿಗಾದರೂ ಕೃಷಿಗೆ ಮಾಡಿದ ಸಾಲ ತೀರಿಸಲು ಸಾಧ್ಯವಾಗುತ್ತದೆ. ಈಗಾಗಲೇ ಸರ್ಕಾರ ತೊಗರಿ ಖರೀದಿಗೆ ಆದೇಶ ನೀಡಿದ್ದು, ತಿಳಿದು ಬಂದಿದೆ. ಆದರೆ, ಪ್ರತಿ ಕ್ವಿಂಟಾಲ್ ತೊಗರಿಗೆ ಕೇವಲ 6000 ರೂ. ನಿಗದಿಪಡಿಸಲಾಗಿದೆ. ಈ ಬೆಲೆ ರೈತರಿಗೆ ಅನುಕೂಲವಲ್ಲ ಎಂದರು.
ಕ್ವಿಂಟಾಲ್ ತೊಗರಿಗೆ ಕನಿಷ್ಟ 10 ಸಾವಿರ ರೂ. ವರೆಗೆ ಬೆಲೆ ನಿಗದಿ ಪಡಿಸಬೇಕು. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಒಂದು ತೊಗರಿ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಯಾವುದೇ ಮಾನ ದಂಡ ವಿಧಿಸದೆ ರೈತರು ಬೆಳೆದ ಎಲ್ಲ ತೊಗರಿ ಖರೀದಿಸಬೇಕು. ಅತೀ ಶೀಘ್ರದಲ್ಲಿ ತೊಗರಿ ಖರೀದಿಗೆ ಚಾಲನೆ ನೀಡಲು ಸಂಬಂಧಿಸಿದ ಪಿಕೆಪಿಎಸ್‌ಗೆ ಆದೇಶ ನೀಡಬೇಕೆಂದರು.
ಪಾಂಡು ಹ್ಯಾಟಿ, ಸದಾಶಿವ ಬರಟಗಿ, ಸಿದ್ರಾಮ ಅಂಗಡಗೇರಿ, ಕೃಷ್ಣಪ್ಪ ಬಮರಡ್ಡಿ, ಗುರುಲಿಂಗಪ್ಪ ಪಡಸಲಗಿ, ರಾಜೇಸಾಬ ವಾಲೀಕಾರ, ಈರಪ್ಪ ತೇಲಿ, ದಾವಲಸಾಬ ನದಾಫ್, ಚಂದ್ರಾಮ ಹಿಪ್ಪಲಿ, ಚಂದ್ರಾಮ ತೆಗ್ಗಿ, ಮಲ್ಲಪ್ಪ ಮಾಡ್ಯಾಳ, ಶೇಖಪ್ಪ ಕರಾಬಿ ಮತ್ತಿತರರಿದ್ದರು.