

ವಿಜಯಪುರ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಇಂಧನ ಉಳಿತಾಯದಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನವಾಗಿದ್ದು ಇದರ ಮೂರು ಘಟಕಳು ರಾಜ್ಯಮಟ್ಟದ ಪ್ರಶಸ್ತಿ ಗಿಟ್ಟಿಸಿಕೊಂಡಿವೆ.
ವಿಜಯಪುರ ಘಟಕ-2, ಬಸವನಬಾಗೇವಾಡಿ ಘಟಕ-2 ಹಾಗೂ ಸಿಂದಗಿ ಘಟಕ-3 ಅನುಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿವೆ. ಕೇಂದ್ರ ಸರ್ಕಾರದಿಂದ ಈ ಪ್ರಶಸ್ತಿ ನೀಡಲಾಗುತ್ತಿದ್ದು ತಲಾ 50 ಸಾವಿರ ರೂ.ಬಹುಮಾನ ಗಿಟ್ಟಿಸಿಕೊಂಡಿವೆ.
ಜ. 16 ರಂದು ಬೆಂಗಳೂರಿನ ಕಬ್ಬನ್ ಪಾರ್ಕ್‌ನ ಜವಾಹರ ಬಾಲಭವನದಲ್ಲಿ ನಡೆದ ಸಮಾರಂಭದಲ್ಲಿ ವ್ಯವಸ್ಥಾಪಕರಾದ ಆನಂದ ಬಿ. ಹೂಗಾರ, ಎಂ.ಎಚ್. ಮದಭಾವಿ ಹಾಗೂ ಪಾರುಪತ್ತೆದಾರ ಎಚ್. ನದಾ ಪ್ರಶಸ್ತಿ ಸ್ವೀಕರಿಸಿದರು.
ಇದರ ಜತೆಗೆ 2018-19ರ ಸಾಲಿನ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಭಾಜನವಾಗಿದ್ದು 5 ಲಕ್ಷ ರೂ. ಬಹುಮಾನ ಪಡೆದಿದೆ. ಜ. 16 ರಂದು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಈಕರಸಾ ಸಂಸ್ಥೆ ಕಲಬುರಗಿಯ ವ್ಯವಸ್ಥಾಪಕ ನಿರ್ದೇಶಕಿ ಜಹೇರಾ ನಾಸಿಂ, ಮುಖ್ಯ ತಾಂತ್ರಿಕ ಶಿಲ್ಪಿ ನಂಜುಂಡಪ್ಪ ಹಾಗೂ ಬ. ಬಾಗೇವಾಡಿಯ ಘಟಕ ವ್ಯವಸ್ಥಾಪಕ ವಿನಾಯಕ ಸಾಲಿಮಠ ಪ್ರಶಸ್ತಿ ಸ್ವೀಕರಿಸಿದ್ದಾರೆ. ಘಟಕದ ಸಾಧನೆಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಮ್ ಮತ್ತಿತರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.