ಆರೋಗ್ಯ ಸಿಬ್ಬಂದಿಗೆ 14 ದಿನದ ಕ್ವಾರಂಟೈನ್ ಅಗತ್ಯವಿಲ್ಲ

VJP-17-4
Published on

ವಿಜಯಪುರ: ಕರೊನಾ ನಿರ್ವಹಣೆಯಲ್ಲಿ ತೊಡಗಿರುವ ಆರೋಗ್ಯ ರಕ್ಷಣಾ ಕಾರ್ಯಕರ್ತರಿಗೆ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕರೊನಾ ನಿರ್ವಹಣೆ ಕುರಿತಂತೆ ಭಾನುವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಹೊರಡಿಸಿರುವ ಸುತ್ತೋಲೆಯಂತೆ ಕರೊನಾ ರೋಗಿಗಳ ನಿರ್ವಹಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳು ಕಿರಿಯ ಮತ್ತು ಹಿರಿಯ ಆರೋಗ್ಯ ಸಹಾಯಕರು, ಶುಶ್ರೂಷಕಿಯರು, ಪ್ರಯೋಗಶಾಲಾ ತಂತ್ರಜ್ಞರು, ಗ್ರೂಪ್ ಡಿ ನೌಕರರು 14 ದಿನಗಳ ಕ್ವಾರಂಟೈನ್‌ಗೆ ಒಳಪಡಿಸುವುದು ಅವಶ್ಯಕತೆಯಿಲ್ಲ ಎಂದು ತಿಳಿಸಿದರು.

ಆಸ್ಪತ್ರೆಯಲ್ಲಿ ಕರ್ತವ್ಯ
ಚಿಕಿತ್ಸೆಯಲ್ಲಿ ತೊಡಗಿರುವವರು ಲಕ್ಷಣವಿಲ್ಲದ ಸಂದರ್ಭದಲ್ಲಿ ಸಾಂಸ್ಥಿಕ (ಇನ್ಸಿಟ್ಯೂಷನಲ್) ಕ್ವಾರಂಟೈನ್ ಮಾಡುವುದು ಸಮಂಜಸವಲ್ಲ. ಇಂತಹ ಆರೋಗ್ಯ ರಕ್ಷಣಾ ಕಾರ್ಯಕರ್ತರು ಪ್ರತಿದಿನ ತಮ್ಮ ಟೆಂಪ್ರೇಚರ್ ಮತ್ತು ಲಕ್ಷಣವಿಲ್ಲದ ಕುರಿತಂತೆ ವರದಿ ಮಾಡಿ, ಕರೊನಾ ಆಸ್ಪತ್ರೆಯಲ್ಲಿ ಎಂದಿನಂತೆ ತಮ್ಮ ಕರ್ತವ್ಯ ಸಲ್ಲಿಸಬಹುದು. ಅದರಂತೆ ಕರೊನಾವಲ್ಲದ ಆಸ್ಪತ್ರೆಗಳಲ್ಲೂ ಸರ್ಕಾರದ ಹೊಸ ಮಾರ್ಗಸೂಚಿಯನ್ವಯ ಕಾರ್ಯನಿರ್ವಹಿಸುವಂತೆ ಅವರು ತಿಳಿಸಿದರು.

ಸಂಬಂಧಪಟ್ಟ ವೈದ್ಯಾಧಿಕಾರಿಗಳು ಮತ್ತು ವೈದ್ಯ ಸಿಬ್ಬಂದಿ ಯೋಜನಾ ಬದ್ಧವಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಲೋಪಕ್ಕೆ ಮತ್ತು ದೂರುಗಳಿಗೆ ಅವಕಾಶ ನೀಡದೆ ಪ್ರಾಮಾಣಿಕ ಮತ್ತು ಜವಾಬ್ದಾರಿಯಿಂದ ತಮ್ಮ ಕರ್ತವ್ಯವನ್ನು ನಿಭಾಯಿಸುವಂತೆ ಅವರು ಸೂಚಿಸಿದರು.

ಜಿಪಂ ಸಿಇಒ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಶರಣಪ್ಪ ಕಟ್ಟಿ, ಡಾ.ಲಕ್ಕಣ್ಣನವರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ.ಬಿ. ಬಿರಾದಾರ, ಡಾ.ಮುಕುಂದ ಗಲಗಲಿ, ಡಾ. ಧಾರವಾಡಕರ ಮತ್ತಿತರರಿದ್ದರು.

ಮತ್ತೊಂದು ಪಾಸಿಟಿವ್ ಪ್ರಕರಣ
ಜಿಲ್ಲೆಯಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು 35 ವರ್ಷದ ಮಹಿಳೆಗೆ ಸೋಂಕು ದೃಢ ಪಟ್ಟಿದೆ. ಈಕೆಯನ್ನು ರೋಗಿ ಸಂಖ್ಯೆ 1122 ಎಂದು ಗುರುತಿಸಲಾಗಿದ್ದು ಈಕೆಗೆ ರೋಗಿ ಸಂಖ್ಯೆ 577 ರಿಂದ ಸೋಂಕು ತಗುಲಿದೆ.

ಶನಿವಾರ ನಾಲ್ಕು ವರ್ಷದ ಹೆಣ್ಣು ಮಗುವಿಗೆ ಕರೊನಾ ಸೋಂಕು ತಗುಲಿದ್ದು, ಈ ರೋಗಿ ಸಂಖ್ಯೆ 109ಗೆ ರೋಗಿ ಸಂಖ್ಯೆ 594ರ ಸಂಪರ್ಕದಿಂದ ಸೋಂಕು ತಗುಲಿರುವ ಬಗ್ಗೆ ದೃಢಪಟ್ಟಿದೆ. ಈವರೆಗೆ ಒಟ್ಟು 54 ಕರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. 14 ರೋಗಿಗಳು ಸಕ್ರಿಯವಾಗಿದ್ದು 37 ರೋಗಿಗಳು ಜಿಲ್ಲಾಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.

ಜಿಲ್ಲೆಗೆ ವಿವಿಧ ರಾಜ್ಯಗಳಿಂದ 10097 ವಲಸೆ ಕಾರ್ಮಿಕರು ಆಗಮಿಸಿದ್ದು, ಸಾಂಸ್ಥಿಕ (ಇನ್ಸಿಟ್ಯೂಷನಲ್) ಕ್ವಾರಂಟೈನ್‌ಗೆ ಕ್ರಮ ಕೈಗೊಳ್ಳಲಾಗಿದೆ. ಗೋವಾದಿಂದ 2886 ವಲಸೆ ಕಾರ್ಮಿಕರು ಬಂದ ಬಗ್ಗೆ ವರದಿಯಾಗಿದೆ. ಈವರೆಗೆ 2741 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದ್ದು, 2608 ನೆಗೆಟಿವ್ ವರದಿ ಬಂದಿದೆ. ಇನ್ನೂ 80 ಜನರ ವರದಿ ಬರಬೇಕಿದೆ.

ಅದರಂತೆ ವಿದೇಶ ಮತ್ತು ಇತರೆ ಪ್ರದೇಶಗಳಿಂದ ಬಂದ 2292 ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ. 28 ದಿನಗಳ ಐಸೋಲೇಶನ್ ಅವಧಿಯನ್ನು 1269 ಜನರು ಪೂರ್ಣಗೊಳಿಸಿದ್ದಾರೆ. 983 ಜನರು 1 ರಿಂದ 28 ದಿನಗಳ ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net