

ವಿಜಯಪುರ: ಜಿಲ್ಲೆಯಲ್ಲಿ ಕರೊನಾ ಸೋಂಕಿತ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವೈದ್ಯಕೀಯ ಆಮ್ಲಜನಕಕ್ಕೂ ಬೇಡಿಕೆ ಅಧಿಕವಾಗುತ್ತಿದೆ. ಹೀಗಾಗಿ ಪ್ರಾಣವಾಯುವಿನ ಸಮರ್ಪಕ ನಿರ್ವಹಣೆಗೆ ಅಪರ ಜಿಲ್ಲಾಧಿಕಾರಿ ಮೇಲ್ವಿಚಾರಣೆಯಲ್ಲಿ ಆಕ್ಸಿಜನ್ ಸೆಲ್ ರಚನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಎರಡು ಆಮ್ಲಜನಕ ಘಟಕಗಳಿದ್ದು, ಕೋವಿಡ್-19 ಚಿಕಿತ್ಸೆ ನೀಡುವ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ನಿತ್ಯ ಆಕ್ಸಿಜನ್ ಲಭ್ಯತೆ ಆಧಾರದ ಮೇಲೆ ಹಾಗೂ ಆಸ್ಪತ್ರೆಗಳಲ್ಲಿನ ಕರೊನಾ ರೋಗಿಗಳ ಪ್ರಮಾಣಾನುಪಾತದಂತೆ ಯಾವುದೇ ರೀತಿಯ ವ್ಯತ್ಯಯ ಆಗದಂತೆ ವೈದ್ಯಕೀಯ ಆಮ್ಲಜನಕ ಪೂರೈಸಲಾಗುತ್ತಿದೆ. ಎರಡು ಆಮ್ಲಜನಕ ಘಟಕಗಳ ಮೇಲ್ವಿಚಾರಣೆಗೆ ತಹಸೀಲ್ದಾರರನ್ನು ಕ್ಯಾಂಪ್ ಅಧಿಕಾರಿಗಳು ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳು ಎಂದು ನೇಮಿಸಿದ್ದು, ಈ ಅಧಿಕಾರಿಗಳು 24x7 ಆಮ್ಲಜನಕ ತಯಾರಿಕಾ ಘಟಕಗಳಲ್ಲಿ ಕಾರ್ಯನಿರ್ವಹಿಸಲು ಆದೇಶಿಸಿದ್ದಾರೆ.
ಆಕ್ಸಿಜನ್ ಸೆಲ್‌ನ ಮೇಲ್ವಿಚಾರಕರಾಗಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ (ಮೊ. 99164 18350), ನೋಡಲ್ ಅಧಿಕಾರಿಯಾಗಿ ಡಾ.ಔದ್ರಾಮ (94495 35101), ಮಾಹಿತಿ ಅಧಿಕಾರಿಯಾಗಿ ಎಸ್.ವಿ. ನಾವಿ (94499 31074), ಸಹಾಯಕರಾಗಿ ಶಿರಸ್ತೆದಾರರಾದ ಡಿ.ವೈ. ಕಟ್ಟಿಮನಿ (94829 45104) ಕಾರ್ಯನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
24x7 ಸಹಾಯವಾಣಿ ಕೇಂದ್ರ ಸ್ಥಾಪನೆ
ಜಿಲ್ಲೆಯ ಜನತೆಗೆ ಕೋವಿಡ್-19 ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳ ಮಾಹಿತಿ, ವೈದ್ಯಕೀಯ ಆಕ್ಸಿಜನ್ ಪೂರೈಕೆ ಹಾಗೂ ಕೋವಿಡ್-19ರ ಇತರ ಮಾಹಿತಿ ಪಡೆಯಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 247 ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ. ವೈದ್ಯಕೀಯ ಆಕ್ಸಿಜನ್ ಪೂರೈಕೆ ಮಾಹಿತಿಗಾಗಿ ಟೋಲ್ ಫ್ರೀ ನಂಬರ್ 1077 ಹಾಗೂ ದೂ. ಸಂಖ್ಯೆ 08352-222101 ಗೆ ಹಾಗೂ ಆಸ್ಪತ್ರೆಗಳಲ್ಲಿ ಬೆಡ್‌ಗಳ ಲಭ್ಯತೆ ಬಗ್ಗೆ ಟೋಲ್ ಫ್ರೀ ನಂಬರ್ 1977 ಹಾಗೂ ದೂ. ಸಂಖ್ಯೆ 08352-222102, 221261ಗೆ ಸಂಪರ್ಕಿಸಲು ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ತಿಳಿಸಿದ್ದಾರೆ.