

ವಿಜಯವಾಣಿ ವಿಶೇಷ
ವಿಜಯಪುರ: ರಾಜ್ಯದಲ್ಲಿ ಕರೊನಾ ಸೋಂಕಿತರು ಸಕಾಲಕ್ಕೆ ಆಕ್ಸಿಜನ್ ಸಿಗದೆ ಸಾವಿಗೀಡಾಗುತ್ತಿರುವ ಸುದ್ದಿ ಭಾರೀ ಪ್ರಮಾಣದಲ್ಲಿ ಸದ್ದು ಮಾಡುತ್ತಿದ್ದರೆ, ಇಲ್ಲಿನ ಜಿಲ್ಲಾಧಿಕಾರಿ ಮಾತ್ರ ಆಕ್ಸಿಜನ್ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.
ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ಹಾಗೂ ಅಧಿಕಾರಿಗಳ ತಂಡ ಆಕ್ಸಿಜನ್ ಸಮಸ್ಯೆ ನೀಗಿಸುವಲ್ಲಿ ಮಾಡುತ್ತಿರುವ ಪ್ರಯತ್ನ ಹುಬ್ಬೇರಿಸುವಂತಿದೆ. ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಏಜೆನ್ಸಿಗಳು, ಕೈಗಾರಿಕೆಗಳು, ನೆರೆಯ ಜಿಲ್ಲೆ ಹೀಗೆ ಹಲವಾರು ಮೂಲಗಳಿಂದ ಆಕ್ಸಿಜನ್ ಪಡೆದು ರೋಗಿಗಳಿಗೆ ಪೂರೈಸುವಲ್ಲಿ ಸಫಲರಾಗಿದ್ದಾರೆ.
ಸದ್ಯ ಆಕ್ಸಿಜನ್ ಪೂರೈಕೆಯಲ್ಲಿ ಸಾಕಷ್ಟು ಸಮಸ್ಯೆ ಮತ್ತು ಸವಾಲುಗಳಿದ್ದು, ಅವುಗಳನ್ನು ನಿಭಾಯಿಸುವಲ್ಲಿ ಅಧಿಕಾರಿಗಳ ತಂಡ ದಿಟ್ಟ ಹೆಜ್ಜೆ ಇರಿಸಿದೆ ಎಂದರೆ ಅದು ವ್ಯರ್ಥ್ಯ ಹೊಗಳಿಕೆಯಲ್ಲ. ಜಿಲ್ಲೆಯಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಕಂಡು ಬಂದಿವೆಯಾದರೂ ಸದ್ಯ ರಾಜ್ಯದ ವಿವಿಧ ಭಾಗಗಳಲ್ಲಿ ಕಂಡು ಕೇಳಿ ಬರುತ್ತಿರುವ ಸ್ಥಿತಿ ಮಾತ್ರ ಜಿಲ್ಲೆಯಲ್ಲಿಲ್ಲ ಎಂಬುದೇ ಸಮಾಧಾನಕರ.
ಆಕ್ಸಿಜನ್ ಮೂಲಗಳು
ಜಿಲ್ಲೆಯ ಬಿಎಲ್ ಡಿಇ ವೈದ್ಯಕೀಯ ಆಸ್ಪತ್ರೆ 13 ಕಿಲೋ ಲೀಟರ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ (ಎಲ್‌ಎಂಒ) ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಇಲ್ಲಿಗೆ ಬಳ್ಳಾರಿ ಪ್ರಾಕ್ಸೇರ್ ಏಜೆನ್ಸಿ ಒಪ್ಪಂದದ ಪ್ರಕಾರ ಆಕ್ಸಿಜನ್ ಪೂರೈಸುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ 6 ಕಿಲೋ ಲೀಟರ್ (ಎಲ್‌ಎಂಒ) ಟ್ಯಾಂಕ್ ಇದ್ದು ಧಾರವಾಡದ ಕರ್ನಾಟಕ ಕೈಗಾರಿಕಾ ಅನಿಲ ಸಂಸ್ಥೆ (ಕೆಐಜಿ) ಯಿಂದ ಒಪ್ಪಂದದ ಪ್ರಕಾರ ಆಕ್ಸಿಜನ್ ಸರಬರಾಜು ಮಾಡಲಾಗುತ್ತಿದೆ. ಕೆಐಜಿಗೆ ಪ್ರಾಕ್ಸೇರ್ ಏಜೆನ್ಸಿ ಬಳ್ಳಾರಿಯಿಂದ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸಿಗುತ್ತದೆ.
ಎಲ್.ಎಚ್. ಬಿದರಿ ಅವರ ಅಶ್ವಿನಿ ಆಸ್ಪತ್ರೆ 3 ಕಿಲೋ ಲೀಟರ್ (ಎಲ್‌ಎಂಒ) ಟ್ಯಾಂಕ್ ಹೊಂದಿದ್ದು ಧಾರವಾಡದ ಕರ್ನಾಟಕ ಕೈಗಾರಿಕಾ ಅನಿಲ ಸಂಸ್ಥೆ (ಕೆಐಜಿ) ಯಿಂದ ಒಪ್ಪಂದದ ಪ್ರಕಾರ ಎಲ್‌ಎಂಒ ಸರಬರಾಜು ಮಾಡಲಾಗುತ್ತಿದೆ. ಕೆಐಜಿಗೆ ಪ್ರಾಕ್ಸೇರ್ ಏಜೆನ್ಸಿ ಬಳ್ಳಾರಿಯಿಂದ ಎಲ್‌ಎಂಒ ಸಿಗುತ್ತದೆ.
ಕುಲಕರ್ಣಿ ಆಕ್ಸಿಜನ್ ಏಜೆನ್ಸಿಯಲ್ಲಿ 13 ಕಿಲೋ ಲೀಟರ್ (ಎಲ್‌ಎಂಒ) ಟ್ಯಾಂಕ್ ಇದೆ. ಈವರೆಗೆ ಕೊಲ್ಹಾಪುರ ಏಜೆನ್ಸಿಯಿಂದ ಎಲ್ಎಂಒ ಪೂರೈಸಲಾಗುತ್ತಿತ್ತು. ಆದರೆ, ಮಹಾರಾಷ್ಟ್ರದಲ್ಲಿ ಬೇಡಿಕೆಯಿಂದಾಗಿ ಅದನ್ನು ನಿಲ್ಲಿಸಲಾಯಿತು. ಆದ್ದರಿಂದ ವಾರದಲ್ಲಿ ಎರಡು ಬಾರಿ ಐಜಿಪಿಎಲ್(ಜೆಎಸ್‌ಡಬ್ಲ್ಯು) ಬಳ್ಳಾರಿಯಿಂದ ಎಲ್‌ಎಂಒ ಪಡೆಯಲಾಗುತ್ತಿದೆ. ಪ್ರತಿ ಬಾರಿ 13 ಕೆಎಲ್ ಅನ್ನು ಸ್ವೀಕರಿಸಲಾಗುತ್ತದೆ. ಇದನ್ನು (13 ಕೆಎಲ್) 1400 ಸಿಲಿಂಡರ್‌ಗಳಾಗಿ ಪರಿವರ್ತಿಸಲಾಗುವುದು ಮತ್ತು ಪ್ರತಿದಿನ ಅವರು ಉಳಿದ ಖಾಸಗಿ ಆಸ್ಪತ್ರೆಗಳು ಮತ್ತು ತಾಲೂಕು ಆಸ್ಪತ್ರೆಗಳಿಗೆ 400 ಸಿಲಿಂಡರ್‌ಗಳನ್ನು ಪೂರೈಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ತಿಳಿಸುತ್ತಾರೆ.
ಇನ್ನು ಎಂಆರ್ ಗ್ಯಾಸ್ ಏಜೆನ್ಸಿ ಎಲೆಕ್ಟ್ರಿಕಲ್ ಆಕ್ಸಿಜನ್ ಜನರೇಟರ್ ಅನ್ನು ಹೊಂದಿದೆ (ಗಾಳಿಯನ್ನು ಬಳಸುತ್ತದೆ ಮತ್ತು ಆಮ್ಲಜನಕವಾಗಿ ಪರಿವರ್ತಿಸುತ್ತದೆ). ಈ ಸಂಸ್ಥೆ ದಿನಕ್ಕೆ ಅಂದಾಜು 450 ಸಿಲಿಂಡರ್‌ಗಳನ್ನು ಉತ್ಪಾದಿಸುತ್ತದೆ. ಅವರು ಖಾಸಗಿ ಆಸ್ಪತ್ರೆಗಳಿಗೆ ಸರಬರಾಜು ಮಾಡುತ್ತಾರೆ.
ಯಶೋದಾ ಎಲೆಕ್ಟ್ರಿಕಲ್ ಆಕ್ಸಿಜನ್ ಜನರೇಷನ್ ಪ್ಲಾಂಟ್ ಹೊಂದಿದ್ದು ಅದು ದಿನಕ್ಕೆ 100 ಸಿಲಿಂಡರ್ ಉತ್ಪಾದಿಸುತ್ತದೆ. ಇದು ಆಮ್ಲಜನಕಕ್ಕೆ ಗಾಳಿಯನ್ನು ಆವರಿಸುತ್ತದೆ.
ಸವಾಲಿನ ಕೆಲಸ
ಕೆಲವು ಖಾಸಗಿ ಆಸ್ಪತ್ರೆಗಳು ಸ್ಥಳೀಯ ಮಾರಾಟಗಾರರಿಂದ ತುಂಬಿದ ಸಿಲಿಂಡರ್‌ಗಳನ್ನು ಪಡೆಯುತ್ತಿವೆ. ಆಮ್ಲಜನಕ ಹಾಸಿಗೆಗಳಿಗೆ ಎಲ್ಲ ಬೇಡಿಕೆಗಳು ಹೆಚ್ಚಾಗುತ್ತಿರುವುದರಿಂದ, ಇದು ತುಂಬಾ ಸವಾಲಿನ ಸಂಗತಿಯಾಗಿದೆ. ಬೇಡಿಕೆ ಮತ್ತು ತುರ್ತು ಪ್ರಕಾರ ಸಿಲಿಂಡರ್‌ಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಡಳಿತ ಕುಲಕರ್ಣಿ ಮತ್ತು ಎಂಆರ್ ಏಜೆನ್ಸಿಯಿಂದ ಆಕ್ಸಿಜನ್ ಪಡೆಯುತ್ತಿದ್ದು ಅದಕ್ಕಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿದೆ.
ಎಂಆರ್ ಗ್ಯಾಸ್ ಏಜೆನ್ಸಿಯಲ್ಲಿ ತಾಂತ್ರಿಕ ಸಮಸ್ಯೆ ಅಥವಾ ನಿರ್ವಹಣೆ ಇದ್ದರೆ ಮಾತ್ರ ಜಿಲ್ಲೆಗೆ ಸಮಸ್ಯೆ ಆಗಲಿದೆ. ಆದರೆ ಈ ಏಜೆನ್ಸಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಮತ್ತೊಂದು ಸವಾಲು ಎಂದರೆ ಕುಲಕರ್ಣಿ ಏಜೆನ್ಸಿಗೆ ಎಲ್‌ಎಂಒ ಪೂರೈಸುವುದು. ಬಳ್ಳಾರಿ ಆಡಳಿತ ಮತ್ತು ಜೆಎಸ್‌ಡಬ್ಲ್ಯೂ ಬಳ್ಳಾರಿಯಿಂದ ಎಲ್‌ಎಂಒ ವಿಳಂಬವಾದರೆ ಎಂಆರ್ ಏಜೆನ್ಸಿಯಿಂದ ನಿರ್ವಹಿಸಬೇಕಾಗುತ್ತದೆ. ತುರ್ತು ಪರಿಸ್ಥಿತಿಯಿಂದಾಗಿ ಸ್ಥಾವರವನ್ನು 2 ಪಾಳಿಯಲ್ಲಿ ನಡೆಸಲು ಕುಲಕರ್ಣಿ ಏಜೆನ್ಸಿಗೆ ಸೂಚನೆ ನೀಡಿದ್ದಾಗಿ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ತಿಳಿಸುತ್ತಾರೆ.
ಒಟ್ಟಿನಲ್ಲಿ ಕರೊನಾ ಸೋಂಕಿತರಿಗೆ ಆಕ್ಸಿಜನ್ ಪೂರೈಸಲು ಜಿಲ್ಲಾಡಳಿತ ಕೈಗೊಳ್ಳುತ್ತಿರುವ ಕ್ರಮ ನಿಜಕ್ಕೂ ಪ್ರಶಂಸನೀಯ.
ಕರೊನಾ ನಿಯಂತ್ರಣ ಹಾಗೂ ಜಿಲ್ಲೆಯಲ್ಲಿ ಆಕ್ಸಿಜನ್, ರೆಮ್‌ಡೆಸಿವಿರ್ ಮತ್ತು ಬೆಡ್ ಸಮಸ್ಯೆ ನೀಗಿಸುವಲ್ಲಿ ವಿಜಯಪುರ ಜಿಲ್ಲಾಡಳಿತ ಕೈಗೊಂಡ ಪಾತ್ರ ನಿಜಕ್ಕೂ ಅಭಿನಂದನೀಯ. ಇಲ್ಲಿನ ಅಧಿಕಾರಿಗಳ ತಂಡ ಸಮರ್ಪಕವಾಗಿ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ ತಿಳಿಸುವೆ.
ಮುರುಗೇಶ ನಿರಾಣಿ, ಗಣಿ ಮತ್ತು ಭೂ ವಿಜ್ಞಾನ ಸಚಿವ