

ವಿಜಯಪುರ: ಉತ್ತರಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ 20 ವರ್ಷದ ಮಹಿಳೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ಎಐಎಂಎಸ್‌ಎಸ್, ಎಐಡಿವೈಒ, ಎಐಡಿಎಸ್‌ಒ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಎಐಎಂಎಸ್‌ಎಸ್ ಸಹ ಸಂಚಾಲಕಿ ಗೀತಾ ಎಚ್. ಮಾತನಾಡಿ, ಉತ್ತರ ಪ್ರದೇಶದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು. ಈ ಪೈಶಾಚಿಕ ಕೃತ್ಯ ಎಸಗಿದ ನಾಲ್ವರು ಮೇಲ್ಜಾತಿಯ ಯುವಕರು ಘಟನೆ ನಡೆದ ನಂತರವೂ ಯಾವುದೇ ಅಳುಕಿಲ್ಲದೆ ಸ್ವತಂತ್ರವಾಗಿ ಓಡಾಡಿಕೊಂಡಿದ್ದು ಸಮಾಜಕ್ಕೆ ಮತ್ತಷ್ಟು ಆಘಾತ ಉಂಟು ಮಾಡಿದೆ. 5 ದಿನಗಳ ನಂತರ ಅರೆಜ್ಞಾನದಲ್ಲಿದ್ದ ಸಂತ್ರಸ್ತೆಯು ಅತ್ಯಾಚಾರಿಗಳನ್ನು ಹೆಸರಿಸಿದ ಬಳಿಕ ಆರೋಪಿಗಳನ್ನು ಬಂಧಿಸಿದ್ದು, 15 ದಿನ ಸಾವು-ಬದುಕಿನ ನಡುವೆ ಹೋರಾಡಿ ಸಂತ್ರಸ್ತೆ ಸಾವಿಗೀಡಾಗಿರುವುದು ಇಡೀ ರಾಜ್ಯಾಡಳಿತದ ವೈಲ್ಯ ಮತ್ತು ಜನತೆ ಬಗ್ಗೆ ನಿಷ್ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದರು.
ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷೆ ಶೋಭಾ ಯರಗುದ್ರಿ ಮಾತನಾಡಿದರು. ಎಐಡಿವೈಒ ಜಿಲ್ಲಾಧ್ಯಕ್ಷ ಸಿದ್ದಲಿಂಗ ಬಾಗೇವಾಡಿ, ಸುರೇಖಾ ಕಡಪಟ್ಟಿ, ದುಂಡೇಶ, ಶಿವರಂಜನಿ ಮತ್ತಿತರರಿದ್ದರು.