44 ಸಂತ್ರಸ್ತರಿಗೆ 52.67 ಲಕ್ಷ ರೂ. ವಿತರಣೆ

HN 12-1
Published on

ವಿಜಯಪುರ: ಜಿಲ್ಲಾದ್ಯಂತ 2019ರ ಜನವರಿ 1 ರಿಂದ ಡಿಸೆಂಬರ್ 31ರ ವರೆಗೆ ಪರಿಶಿಷ್ಟ ಜಾತಿ/ ಪಂಗಡದ ದೌರ್ಜನ್ಯಕ್ಕೆ ಒಳಗಾದ ಒಟ್ಟು 44 ಸಂತ್ರಸ್ತರಿಗೆ ಜಿಲ್ಲಾಡಳಿತದ ವತಿಯಿಂದ ಒಟ್ಟು 52.67 ಲಕ್ಷ ರೂ.ಗಳ ಪರಿಹಾರ ಧನ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2019ನೇ ಸಾಲಿನಲ್ಲಿ ಒಟ್ಟು 49 ಪರಿಶಿಷ್ಟ ಜಾತಿ/ ಪರಿಶಿಷ್ಟ ಜನಾಂಗದವರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆದಿದ್ದು, ಅದರಲ್ಲಿ 44 ಪ್ರಕರಣಗಳಲ್ಲಿ 52.67 ಲಕ್ಷ ರೂ.ಗಳ ಪರಿಹಾರ ಧನ ವಿತರಿಸಲಾಗಿದ್ದು, ವಿವಿಧ ಹಂತದಲ್ಲಿರುವ ಬಾಕಿಯಿರುವ ಮೂರು ಪ್ರಕರಣಗಳಿಗೆ ಪರಿಹಾರ ಧನ ವಿತರಿಸಬೇಕಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿನ ಜನವರಿ 1ರಿಂದ ೆಬ್ರವರಿ 29ರ ವರೆಗೆ 13 ದೌರ್ಜನ್ಯ ಪ್ರಕರಣಗಳ ಪೈಕಿ 6 ಪ್ರಕರಣಗಳಿಗೆ ಒಟ್ಟು 2.50 ಲಕ್ಷ ರೂ.ಗಳ ಪರಿಹಾರ ಧನವನ್ನು ದೌರ್ಜನ್ಯಕ್ಕೊಳಗಾದ ಸಂತ್ರಸ್ತರಿಗೆ ವಿತರಿಸಲಾಗಿದೆ. ಬಾಕಿ ಇರುವ 7 ಪ್ರಕರಣಗಳಲ್ಲಿ ಪರಿಹಾರ ಧನ ವಿತರಿಸಬೇಕಾಗಿದೆ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ದೌರ್ಜನ್ಯ ನಿಯಂತ್ರಣ ಕಾಯ್ದೆ 1989 ಅಡಿಯಲ್ಲಿ 161 ಪ್ರಕರಣಗಳ ಪೈಕಿ 42 ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಲಾಗಿದೆ. ಅದರಂತೆ ಪ್ರಸ್ತುತ ಸಾಲಿನಲ್ಲಿ 16 ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಇತ್ಯರ್ಥ ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪರಿಶಿಷ್ಟ ಜಾತಿ/ ಪರಿಶಿಷ್ಟ ಸಮುದಾಯದ ಜನರಿಗೆ ಹೊಸೂರ ಗ್ರಾಮ, ಬ್ಯಾಲ್ಯಾಳ ಗ್ರಾಮ ಸೇರಿದಂತೆ ಅವಶ್ಯಕತೆ ಇರುವ ಕಡೆ ಸ್ಮಶಾನ ಭೂಮಿ ಸಮಸ್ಯೆ ಪರಿಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಹಾಲ್ಯಾಳ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಕಾಲನಿಯಲ್ಲಿ ರಸ್ತೆ ಸಮಸ್ಯೆ ನಿವಾರಣೆಗಾಗಿ ಅವಶ್ಯಕತೆ ಇರುವ ಜಮೀನಿನ ಕುರಿತು ಮಾ. 16ರೊಳಗೆ ಜಮೀನು ದರ ನಿಗದಿಪಡಿಸಿ ಖರೀದಿಗೆ ಪ್ರಯತ್ನಿಸಬೇಕು. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಹಕಾರದೊಂದಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅವಶ್ಯಕತೆ ಇದ್ದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ತಿಳಿಸಿದರು.
ಜಿಪಂ ಸಿಇಒ ಗೋವಿಂದ ರೆಡ್ಡಿ, ಎಸ್‌ಪಿ ಅನುಪಮ್ ಅಗರವಾಲ್, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಅಡಿವೆಪ್ಪ ಸಾಲಗಲ್, ಅರವಿಂದ ಸಾಲವಾಡಗಿ, ರಾಜಶೇಖರ ಕೂಚಬಾಳ, ಮುತ್ತಣ್ಣ ಸಾಸನೂರ, ಮನೋಹರ ಕಾಂಬಳೆ, ಬಸವರಾಜ ಪೂಜಾರಿ, ವಿನಾಯಕ ಗುಣಸಾಗರ, ಪರಶುರಾಮ ಮಾದರ, ಶಿವಾನಂದ ಪಟ್ಟೇದ, ಗಣಪತಿ ಬಾನಿಕೋಲ, ಸುರೇಶ ಮಣೂರ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೋದ್ದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net