ಕುಡಿಯುವ ನೀರಿನ ಸಮಸ್ಯೆ ಆಗದಿರಲಿ

HN 25-2
Published on

ವಿಜಯಪುರ: ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಆಗದಂತೆ ಮುನ್ನೆಚ್ಚರಿಕೆಯಾಗಿ ಕೆರೆಗಳಿಗೆ ಕಾಲುವೆ ಮೂಲಕ ನೀರು ಹರಿಸುವ ಜತೆಗೆ ನೀರಿನ ನಿರ್ವಹಣೆ ಮಾಡುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡ ಜಿಲ್ಲಾಮಟ್ಟದ ವಿಪತ್ತು ನಿರ್ವಹಣಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸಕಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಜೂನ್ ಅಂತ್ಯದವರೆಗೆ ಕುಡಿಯುವ ನೀರಿನ ಕೊರತೆಯಾಗದಂತೆ ಜಿಲ್ಲೆಯ ಆಯಾ ಕೆರೆಗಳಿಗೆ ಕಾಲುವೆ ನೀರು ಸಮರ್ಪಕವಾಗಿ ಲಭ್ಯವಿರುವ ಜತೆಗೆ ಸಮರ್ಪಕ ನೀರಿನ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬೇಸಿಗೆಯಲ್ಲಿ ಶಾಶ್ವತ ಕುಡಿಯುವ ನೀರಿನ ಕ್ರಮಕ್ಕೆ ಪ್ರಥಮ ಆದ್ಯತೆ ನೀಡಬೇಕು. ಸರ್ಕಾರಿ ಕೊಳವೆ ಬಾವಿಗಳ ಲಭ್ಯತೆಯೊಂದಿಗೆ ಖಾಸಗಿ ಬೊರ್‌ವೆಲ್‌ಗಳ ನೀರು ಲಭ್ಯತೆ ಆಧಾರದ ಮೇಲೆ ಅವಶ್ಯಕತೆ ಇರುವ ಕಡೆ ಖಾಸಗಿ ಬೋರ್‌ವೆಲ್ ಮಾಲೀಕರೊಂದಿಗೆ ಒಪ್ಪಂದ, ತೀರಾ ಅವಶ್ಯಕತೆಯಿರುವ ಕಡೆ ಪರ್ಯಾಯವಾಗಿ ನೀರಿನ ಟ್ಯಾಂಕರ್ ಬಗ್ಗೆ ಪ್ರಸ್ತಾವನೆಗಳನ್ನು ಸಿದ್ಧಪಡಿಸಿ ಅನುಮೋದನೆ ಪಡೆದುಕೊಳ್ಳಬೇಕು. ವಿಜಯಪುರ ನಗರದಲ್ಲಿ ಕುಡಿಯುವ ನೀರಿನ ಸಮರ್ಪಕ ನಿರ್ವಹಣೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

5.50 ಕೋಟಿ ರೂ. ಉಳಿತಾಯ

ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಸುಧಾರಿಸುತ್ತಿದ್ದು, ಪ್ರತಿಬಾರಿ ತೀವ್ರ ನೀರಿನ ಅಭಾವ ಎದುರಿಸುತ್ತಿರುವ ಮುದ್ದೇಬಿಹಾಳ, ಇಂಡಿ, ದೇವರ ಹಿಪ್ಪರಗಿ ಹಾಗೂ ಚಡಚಣಗಳಲ್ಲಿ ವಿಶೇಷ ಗಮನ ನೀಡಬೇಕು. ಈವರೆಗೆ ಜಿಲ್ಲೆಯಾದ್ಯಂತ ಯಾವುದೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿಲ್ಲ. ಈವರೆಗೆ ಟ್ಯಾಂಕರ್‌ಗಳಿಗಾಗಿಯೇ ವ್ಯಯವಾಗಲಿದ್ದ 5.50 ಕೋಟಿ ರೂ. ಅನುದಾನ ಉಳಿತಾಯವಾದಂತಾಗಿದೆ. ಮುಂಬರುವ ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮೇಲೆ ಅವಲಂಬನೆಯಾಗದೆ ನೈಸರ್ಗಿಕ ಜಲಸಂಪನ್ಮೂಲಗಳ ಬಳಕೆಗೆ ವಿಶೇಷ ಒತ್ತು ನೀಡಬೇಕು ಎಂದರು.

ಕೆರೆ ಭರ್ತಿಗೆ ಕ್ರಮ

ಕೂಡಿಯುವ ನೀರಿನ ಸಮಸ್ಯೆ ಹೆಚ್ಚಿರುವ ಕಡೆ ವಿಶೇಷ ಗಮನ ನೀಡುವ ಜೊತೆಗೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸಂಗೋಗಿ ಕೆರೆಯಿಂದ 81 ಗ್ರಾಮಗಳಿಗೆ ನೀರು ಲಭ್ಯವಾಗುವ ಹಿನ್ನೆಲೆಯಲ್ಲಿ ಕೆರೆ ಭರ್ತಿಗೆ ಮತ್ತು ನೀರಿನ ನಿರ್ವಹಣೆಗೆ ಗಮನ ನೀಡಬೇಕು. ತಡವಲಗಾ ಕೆರೆ ಭರ್ತಿಗೆ ಸಂಬಂಧಪಟ್ಟಂತೆ ಅವಶ್ಯಕ ಕ್ರಮಗಳ ಬಗ್ಗೆ ಚಿಂತನೆ ನಡೆಸಬೇಕು. ಹೊರ್ತಿ ಕೆರೆಯಿಂದ 32 ಗ್ರಾಮಗಳಿಗೆ ನೀರು ಲಭ್ಯವಾಗುವ ಹಿನ್ನೆಲೆಯಲ್ಲಿ ಇರುವ ಜಲಸಂಪನ್ಮೂಲ ಸದ್ಬಳಕೆ ಮಾಡಬೇಕು. ಅಲ್ಲದೆ ಅರ್ಜನಾಳ, ಲೋಣಿ ಕೆರೆ, ಬಸವನ ಬಾಗೇವಾಡಿಯ ಅರೆಶಂಕರ ಕೆರೆ ನೀರು ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.

ವಸ್ತುಸ್ಥಿತಿ ವರದಿ ನೀಡಿ

ಪೀರಾಪುರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತಹಸೀಲ್ದಾರ್, ತಾಪಂ ಕಾರ್ಯನಿರ್ವಹಣಾ ಅಧಿಕಾರಿಗಳು ಮತ್ತು ಸಹಾಯಕ ಕಾರ್ಯ ನಿರ್ವಹಣಾ ಅಭಿಯಂತರರು ಮುಂಬರುವ ಜೂನ್ ಅಂತ್ಯದವರೆಗೆ ನೀರು ನಿರ್ವಹಣೆ ಕುರಿತಂತೆ ಸ್ಥಳೀಯ ಭೇಟಿ ನೀಡಿ, ವಸ್ತು ಸ್ಥಿತಿ ವರದಿ ಸಿದ್ಧಪಡಿಸಿ ಸಕಾಲಕ್ಕೆ ಪ್ರಸ್ತಾವನೆಗೆ ಅನುಮೋದನೆ ಪಡೆಯುವಂತೆ ಸೂಚನೆ ನೀಡಿದರು. ಸಿಂದಗಿ ತಾಲೂಕಿನ ಬಳಗಾನೂರ ಮತ್ತು ಯಂಕಂಚಿ ಕೆರೆಗಳ ಸಂಪೂರ್ಣ ಭರ್ತಿ ಕುರಿತು ಸಿಂದಗಿ ತಹಸೀಲ್ದಾರರು ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು. ಕನ್ನೊಳ್ಳಿ ಕೆರೆಗೆ ಸಂಬಂಧಪಟ್ಟಂತೆ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು. ಸಿಂದಗಿ ಪಟ್ಟಣಕ್ಕೆ ಜೂನ್ ಅಂತ್ಯದವರೆಗೆ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಭೀಮಾ ನದಿ ನೀರು ಸದ್ಬಳಸಿಕೊಳ್ಳಿ

ಇಂಡಿ ತಾಲೂಕಿನ ಚಡಚಣ, ನಿವರಗಿ ಮತ್ತು ದಸೂರ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕು. ಭೀಮಾ ನದಿ ನೀರು ಸದ್ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಅಸ್ಕಿ, ಕಲಕೇರಿಗಳಲ್ಲಿ ನೀರಿನ ಸಮಸ್ಯೆಗಳ ಕುರಿತು ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರು.

ಜಿಪಂ ಸಿಇಒ ಗೋವಿಂದ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ, ಜಿಲ್ಲೆಯ ತಹಸೀಲ್ದಾರರು, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು, ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು, ನಗರ ನೀರು ಸರಬರಾಜು ಇಲಾಖೆ ಅಧಿಕಾರಿಗಳು, ಸಹಾಯಕ ಅಭಿಯಂತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net