

ವಿಜಯಪುರ: ಜಿಲ್ಲೆಯ ಕೆರೆ , ಹಳ್ಳಗಳು ಮತ್ತು ಅರಣ್ಯ ಪ್ರದೇಶಗಳ ಸುತ್ತಮುತ್ತ ವಲಸೆ ಪಕ್ಷಿಗಳ ಅಸ್ವಾಭಾವಿಕ ಮರಣ ಕಂಡು ಬಂದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪ್ರಾಣಿಜನ್ಯ ನಿರ್ವಹಣಾ ಸಮಿತಿ ಹಾಗೂ ಹಕ್ಕಿಜ್ವರ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಬೇರೆ ರಾಜ್ಯದಿಂದ ಬರುವ ಕೋಳಿ ಮತ್ತು ಮೊಟ್ಟೆ ಮೇಲೆ ಸೂಕ್ತ ನಿಗಾ ಇರಿಸಬೇಕು. ವಲಸೆ ಬರುವ ಪಕ್ಷಿಗಳು ಕೆರೆ ಮತ್ತು ನೀರಿನ ಸಂಗ್ರಹಾಲಯಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೃತಪಟ್ಟಿರುವ ಬಗ್ಗೆ ತೀವ್ರ ನಿಗಾ ಇಡುವಂತೆ ತಿಳಿಸಿದರು.
ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಭಾಗದ ಧೂಳಖೇಡ, ಶಿರಾಡೊಣ, ಸಿದ್ದಾಪುರ ಮತ್ತು ಕನಮಡಿಯಲ್ಲಿ ಚೆಕ್‌ಪೋಸ್ಟ್ ಪ್ರಾರಂಭಿಸಿದ್ದು , ನಾಲ್ಕು ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ನಿಗಾ ಇಡಲಾಗಿದೆ. ಕೋಳಿ ಮತ್ತು ಕೋಳಿ ಉತ್ಪನ್ನಗಳನ್ನು ಸಾಗಿಸುವ ವಾಹನಗಳನ್ನು ಚೆಕ್‌ಪೋಸ್ಟ್‌ಗಳಲ್ಲಿ ಗುರುತಿಸಿ ಅವಶ್ಯಕ ಸ್ಯಾನಿಟೈಸರ್ ಮಾಡಲು ಸ್ಥಳೀಯ ಸಂಸ್ಥೆಗಳ ಮತ್ತು ಇತರ ಇಲಾಖೆಗಳ ಸಹಕಾರದೊಂದಿಗೆ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಪ್ರಾಣೇಶ್ ಜಹಗೀರದಾರ ಮಾತನಾಡಿ, ಮಹಾರಾಷ್ಟ್ರ ಸೇರಿದಂತೆ 10 ರಾಜ್ಯಗಳಲ್ಲಿ ಹಕ್ಕಿಜ್ವರ ಕಂಡು ಬಂದಿದ್ದು, ರೋಗಗ್ರಸ್ತ ಕೋಳಿಗಳಿಂದ ಈ ರೋಗವು ಬೇರೆ ಕೋಳಿಗಳಿಗೆ ಹರಡುತ್ತದೆ. ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ (ರ‌್ಯಾಪಿಡ್ ರೆಸ್ಪಾನ್ಸ್ ಟೀಮ್) ಸನ್ನದ್ಧುಗೊಳಿಸಿ ತರಬೇತಿ ನೀಡಲಾಗಿದೆ. ಜಿಲ್ಲೆಯ ಪಶು ಸಂಗೋಪನಾ ಇಲಾಖೆಯ ಎಲ್ಲ ಸಹಾಯಕ ನಿರ್ದೇಶಕರಿಗೆ, ಅಧಿಕಾರಿಗಳಿಗೆ ತಾಂತ್ರಿಕ ಮಾಹಿತಿ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 54 ಕೋಳಿ ಾರಂಗಳಿದ್ದು, ಸಂಬಂಧಿಸಿದ ಸಿಬ್ಬಂದಿ ಪ್ರತಿದಿನ ಕೋಳಿ ಾರಂಗಳಿಗೆ ಭೇಟಿ ನೀಡಿ ಜೈವಿಕ ಸುರಕ್ಷತೆ ಬಗ್ಗೆ ಮಾಹಿತಿ ನೀಡುವ ಜತೆಗೆ ಕೋಳಿಗಳ, ಪಕ್ಷಿಗಳ ಮರಣ ಸಂಭವಿಸಿದಲ್ಲಿ ವರದಿ ನೀಡಲು ಸೂಚನೆ ನೀಡಲಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.
ಜಿಪಂ ಸಿಇಒ ಲಕ್ಷ್ಮಿಕಾಂತ್ ರೆಡ್ಡಿ, ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ಪಶು ಸಂಗೋಪನಾ, ಅರಣ್ಯ ಇಲಾಖೆ ಅಧಿಕಾರಿಗಳು, ಪಶುವೈದ್ಯರು ಉಪಸ್ಥಿತರಿದ್ದರು.