ಅನುದಾನ ಬಳಸದಿದ್ದರೆ ಕ್ರಿಮಿನಲ್ ಪ್ರಕರಣ ದಾಖಲು

VJP 17-6
Published on

ವಿಜಯಪುರ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿಶೇಷ ಘಟಕ ಹಾಗೂ ಗಿರಿಜನ ಯೋಜನೆಯಡಿಯ ಅನುದಾನ ಬಳಸಲು ನಿರ್ಲಕ್ಷೃ ತೋರಿ ಲ್ಯಾಪ್ಸ್‌ಗೊಳಿಸಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕಾನೂನಡಿ ಅವಕಾಶವಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ 2020-21 ನೇ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ವಲಯ ಯೋಜನೆ ಕಾರ್ಯಕ್ರಮಗಳ ಇಲಾಖಾವಾರು ನವೆಂಬರ್ -2020 ರ ಅಂತ್ಯದವರೆಗೆ ಸಾಧಿಸಿದ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರದ ನಿಯಮಾನುಸಾರ ಅನುದಾನವನ್ನು ಬಳಸಿ, ಈ ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಸಕೂಡದು. ಸರ್ಕಾರದ ಆದೇಶ, ನಿರ್ದೇಶನದನ್ವಯ ಅನುದಾನ ಬಳಸಬೇಕು. ಎಸ್‌ಸಿ, ಎಸ್‌ಟಿ ಕಾಯ್ದೆ ಪ್ರಕಾರ ಅರ್ಹ ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ಅನುದಾನವನ್ನು ತಲುಪಿಸಿ, ಮಾರ್ಚ್ ಮಾಹೆಯ ಅಂತ್ಯದೊಳಗೆ ಅನುದಾನ ಬಳಸಬೇಕು. ಇಲ್ಲದಿದ್ದರೆ ಎಸ್‌ಸಿ, ಎಸ್‌ಟಿ ಕಾಯ್ದೆ ಪ್ರಕಾರ ಅದು ಅಪರಾಧವಾಗುತ್ತದೆ ಎಂದು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ನಗರ ಸ್ಥಳೀಯ ಸಂಸ್ಥೆಗಳ ಕ್ರಿಯಾ ಯೋಜನೆಗೂ ಅಗತ್ಯ ಕ್ರಮ ಕೈಗೊಳ್ಳಿ, ಯಾವುದೇ ದೂರುಗಳು ಬರದಂತೆ ನಿಗಾವಹಿಸಬೇಕು. ಸಕಾಲದ ಬಾಕಿ ಅರ್ಜಿಗಳನ್ನು ಕೂಡಲೇ ಪೂರ್ಣಗೊಳಿಸಿ ತಾಂತ್ರಿಕ ವಿಷಯಗಳನ್ನು ತಮಗೂ ತಿಳಿಸಿ ಎಂದು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ.ಪ್ರಾಣೇಶ ಜಹಾಗೀರದಾರ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಕೃಷಿ ಜಂಟಿ ನಿರ್ದೇಶಕ ವಿಲಿಯಂ ರಾಜಶೇಖರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net