20ನೇ ದಿನಕ್ಕೆ ಕಾಲಿಟ್ಟ ಆಶಾಗಳ ಹೋರಾಟ

VJP 29-1
Published on

ವಿಜಯಪುರ: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಹೋರಾಟ 20ನೇ ದಿನಕ್ಕೆ ಕಾಲಿರಿಸಿದ್ದು, ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸರ್ಕಾರದ ವಿರುದ್ಧ ಘೋಷಣೆ ಕೂಗಿದ ನೂರಾರು ಆಶಾ ಕಾರ್ಯಕರ್ತೆಯರು ನಂತರ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್ ಅವರಿಗೆ ಮನವಿ ಸಲ್ಲಿಸಿದರು.
ಎಐಯುಟಿಯುಸಿ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಸುನೀಲ ಸಿದ್ರಾಮಶೆಟ್ಟಿ ಮಾತನಾಡಿ, ರಾಜ್ಯ ಸರ್ಕಾರದ ಗೌರವಧನ ಮತ್ತು ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಎರಡನ್ನೂ ಒಂದುಗೂಡಿಸಿ ಮಾಸಿಕ ಕನಿಷ್ಟ 12,000 ರೂ. ವೇತನ ಪಾವತಿಸಬೇಕು. ಕರೊನಾ ಸೋಂಕು ನಿವಾರಣೆಗೆ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸುರಕ್ಷಾ ಪರಿಕರಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಬಿ.ಭಗವಾನರೆಡ್ಡಿ ಮಾತನಾಡಿ, ಪ್ರತಿ ಗ್ರಾಮ ಮತ್ತು ನಗರ ಮಟ್ಟದಲ್ಲಿ ಕೆಲಸ ನಿರ್ವಹಿಸುವ ಆಶಾ ಕಾರ್ಯಕರ್ತೆಯರು ಗರ್ಭಿಣಿಯರ ಆರೈಕೆ, ಸಾಂಕ್ರಾಮಿಕ ರೋಗ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಹೋರಾಟ ನಡೆಸುತ್ತಿದ್ದರೂ ಸರ್ಕಾರ ಈವರೆಗೂ ಸ್ಪಂದಿಸದಿರುವುದು ಖೇದಕರ ಎಂದರು.

ಆಶಾ ಸಂಘದ ಜಿಲ್ಲಾ ಕಾರ್ಯದರ್ಶಿ ಭಾರತಿ ದೇವಕತೆ ಮಾತನಾಡಿ, ನಮ್ಮೆಲ್ಲರನ್ನು ಸಮಾಜ ಸೇವೆ ಮಾಡಲು ನೇಮಕ ಮಾಡಿಕೊಂಡ ಸರ್ಕಾರ ನಮ್ಮ ಹಿತರಕ್ಷಣೆ ಮಾತ್ರ ಮರೆತಿದೆ. ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ಆಶಾ ಕಾರ್ಯಕರ್ತೆಯರ ಹಿತ ಕಾಯಲು ಸರ್ಕಾರ ಬದ್ಧವಾಗಬೇಕೆಂದರು.

ಎಐಡಿವೈಒ ಸಿದ್ದಲಿಂಗ ಬಾಗೆವಾಡಿ, ಭರತಕುಮಾರ ಎಚ್.ಟಿ, ಗೀತಾ.ಎಚ್, ಲೈಲಾ ಪಠಾಣ, ಸಂಗಮ ಕುಂಬಾರ, ಲಕ್ಷ್ಮಿ ಸೀಮಿಕೆರಿ, ಅಂಬಿಕಾ ವಳಸಂಗ, ಜಯಶ್ರೀ ಕುಂಬಾರ, ಭಾರತಿ ಮ್ಯಾಗೇರಿ, ಲಲಿತಾ ತಳವಾರ, ಅಣ್ಣಕ್ಕ ಗಾಣಿಗೇರ, ಮಲ್ಲಮ್ಮ ಕಠಿ, ಸುರೇಖಾ ಬಡಿಗೇರ, ಜಯಶ್ರೀ ಅವಟಿ, ಜಯಶ್ರೀ ಬಿರಾದಾರ, ದೀಪಾ ಬಂಡಿವಡ್ಡರ, ಬಸಮ್ಮ ಹೆಳವಾರ, ಬೇಬಿ ಬಿರಾದಾರ, ಸರೋಜನಿ ಪೋದ್ದಾರ, ಮಿನಾಕ್ಷಿ ಚವಾಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net