

ವಿಜಯಪುರ: ಕರೊನಾ ಸೋಂಕಿತರ ಆರೋಗ್ಯದ ಮೇಲೆ ನಿಗಾ ಇರಿಸಲು ಹಾಗೂ ಅವರ ಚಿಕಿತ್ಸೆಗಾಗಿ ಜಿಲ್ಲಾಡಳಿತ ವಿಶೇಷ ಆಪ್ ಸಿದ್ಧಪಡಿಸಿದೆ.
ಬೆಳಗಾವಿ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲನ್ ಬಿಸ್ವಾಸ್ ನಿರ್ದೇಶನದ ಮೇರೆಗೆ ಆ್ಯಪ್ ಸಿದ್ಧಪಡಿಸಲಾಗಿದ್ದು, ಶುಕ್ರವಾರದಿಂದ ಕಾರ್ಯಾರಂಭಗೊಳಿಸುತ್ತಿರುವುದಾಗಿ ಜಿಲ್ಲಾಡಳಿತ ತಿಳಿಸಿದೆ.
ಸ್ಥಳೀಯ ‘6ಐ ಸೊಲೂಷನ್’ ಎಂಬ ಸಂಸ್ಥೆಯಿಂದ ಈ ಆ್ಯಪ್ ಸಿದ್ಧಪಡಿಸಲಾಗಿದೆ. ಒಂದು ಮೊಬೈಲ್ ತಂತ್ರಾಂಶವನ್ನು ಸೋಂಕಿತ ರೋಗಿಯ ಬಳಿ ಇರಿಸಲಾಗುತ್ತಿದೆ. ವೈದ್ಯರು ಈ ತಂತ್ರಾಂಶವನ್ನು ತಮ್ಮ ಮೊಬೈಲ್‌ನಲ್ಲಿ ಅಳವಡಿಸಿಕೊಳ್ಳಲಿದ್ದಾರೆ. ಆ ಮೂಲಕ ಕುಳಿತಲ್ಲೇ ಸೋಂಕಿತ ಆರೋಗ್ಯದ ಮೇಲೆ ನಿಗಾ ಇರಿಸಲಿದ್ದಾರೆ. ಕಂಟ್ರೋಲ್ ರೂಂನಲ್ಲಿ ಕುಳಿತುಕೊಂಡೇ ರೋಗಿಗೆ ಬೇಕಾದ ಚಿಕಿತ್ಸೆ ನೀಡಲು ಸಲಹೆ ನೀಡಬಹುದಾಗಿದೆ. ರೋಗಿಯ ನೈಜ ಸ್ಥಿತಿ ಅರಿಯುವುದೇ ಈ ತಂತ್ರಾಂಶದ ಉದ್ದೇಶವಾಗಿದೆ.
10 ವಿಶೇಷ ತಜ್ಞರು ಕುಳಿತಲ್ಲಿಯೇ ಆರೋಗ್ಯ ಪರೀಕ್ಷೆ ನಡೆಸಲು ಈ ಆ್ಯಪ್ ಸಹಾಯಕವಾಗಲಿದೆ. ಸೋಂಕಿತರನ್ನು ನೇರವಾಗಿ ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ, ವಿಶೇಷ ತಜ್ಞರು ತಮ್ಮ ವ್ಯಾಪ್ತಿಗೆ ಬರುವ ಇತರ ರೋಗದ ಲಕ್ಷಣ ಸಹ ಅರಿತು ಕೂಡಲೇ ಸಮರ್ಪಕ ಚಿಕಿತ್ಸೆ ನೀಡಲು ನೆರವಾಗಲಿದೆ. ಜತೆಗೆ ರಾಜ್ಯದ ತಜ್ಞರ ಸಮಿತಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಲಹೆ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.