ಮುದ್ರಣ ದರ ಸಮರ್ಪಕ ನಿಗದಿಗೆ ಒತ್ತಾಯ

VJP 7-1
Published on

ವಿಜಯಪುರ: ಗ್ರಾಪಂ ಚುನಾವಣೆ ಹಿನ್ನೆಲೆ ಮುದ್ರಣ ದರದ ಮೇಲೆ ಅಂಕುಶ ಹಾಕದಂತೆ ಪ್ರಿಂಟಿಂಗ್ ಪ್ರೆಸ್ ವರ್ಕರ್ಸ್‌ ಅಸೋಸಿಯೇಷನ್ ನೇತೃತ್ವದಲ್ಲಿ ಮುದ್ರಣಾಲಯಗಳ ಮಾಲೀಕರು ಜಿಲ್ಲಾಡಳಿತಕ್ಕೆ ಸೋಮವಾರ ಮನವಿ ಮಾಡಿದರು.

ಈಗಾಗಲೇ ಲಾಕ್‌ಡೌನ್ ಹಿನ್ನೆಲೆ ಮುದ್ರಣಾಲಯಗಳ ಮಾಲೀಕರು ಸಾಕಷ್ಟು ತೊಂದರೆಗೆ ಸಿಲುಕಿದ್ದಾರೆ. ಏಳೆಂಟು ತಿಂಗಳು ಕೆಲಸವಿಲ್ಲದೆ ಬದುಕು ಬೀದಿಗೆ ಬಿದ್ದಿದೆ. ಇಂಥ ಸಂದರ್ಭದಲ್ಲಿ ಸರ್ಕಾರ ಮುದ್ರಣಾಲಯಗಳ ಮಾಲೀಕರು ಹಾಗೂ ಕಾರ್ಮಿಕರ ನೆರವಿಗೆ ಬರಲಿಲ್ಲ. ಇದೀಗ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮುದ್ರಣಾಲಯಗಳ ಮಹತ್ವದ ಅರಿವಾಗಿದೆ. ಈ ನಿಟ್ಟಿನಲ್ಲಿ ಮುದ್ರಣ ದರದ ಮೇಲೆ ನಿಯಂತ್ರಣ ಸಾಧಿಸುವ ಮಾತು ಕೇಳಿ ಬಂದಿದ್ದು, ಯಾವುದೇ ಕಾರಣಕ್ಕೂ ಮುದ್ರಣ ದರದ ಮೇಲೆ ನಿಯಂತ್ರಣ ಹಾಕದೆ ಮಾಲೀಕರು ಹಾಗೂ ಕಾರ್ಮಿಕರ ಹಿತ ಕಾಪಾಡಲು ಮನವಿ ಮಾಡಿದರು.

ಪ್ರಿಂಟಿಂಗ್ ಪ್ರೆಸ್ ವರ್ಕರ್ಸ್‌ ಅಸೋಸಿಯೇಷನ್ ಅಧ್ಯಕ್ಷ ಚಿದಾನಂದ ಗು. ವಾಲಿ ಮಾತನಾಡಿ, ಸರ್ಕಾರ ಚುನಾವಣೆ ಬಂದಾಗ ಮಾತ್ರ ಮುದ್ರಣಾಲಯಗಳ ಮಹತ್ವ ಅರಿಯುತ್ತದೆ. ಇನ್ನುಳಿದ ದಿನಗಳಲ್ಲಿ ಅವರ ಸಮಸ್ಯೆ ಆಲಿಸುವ ಪ್ರಯತ್ನ ಮಾಡಲ್ಲ ಎಂದರು.

ಕರೊನಾದಿಂದಾಗಿ ಮುದ್ರಣ ಮಾಲೀಕರು ಮತ್ತು ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದುಡಿಯುವ ಕೈಗಳಿಗೆ ಕೆಲಸವಿಲ್ಲದಾಗಿದೆ. ಸರ್ಕಾರ ಕಾರ್ಮಿಕರ ನೆರವಿಗೆ ಧಾವಿಸಬೇಕು. ಅವರಿಗೆ ನಿವೇಶನ ಸೌಲಭ್ಯ ಕಲ್ಪಿಸಬೇಕು. ಉದ್ಯೋಗ ಚೀಟಿ ನೀಡಬೇಕು. ಬಡ್ಡಿ ರಹಿತ ಸಾಲ ಸೌಲಭ್ಯ ಕಲ್ಪಿಸಬೇಕೆಂದು ಮನವಿ ಮಾಡಿದರು.

ಉಪಾಧ್ಯಕ್ಷ ಪ್ರಕಾಶ ಮಠ, ವೆಂಕಟೇಶ ಕಪಾಲಿ, ಖಜಾಂಚಿ ಹನ್ೀ ಮುಲ್ಲಾ, ಉಮೇಶ ಕುಲಕರ್ಣಿ, ನಬೀ ಮಕಾಂದಾರ, ಸಂತೋಷ ಹುಣಶ್ಯಾಳ, ದೀಪಕ ಜಾಧವ, ಕಲಿಮ್ ಹುಂಡೇಕಾರ, ಗುರು ಬರಗಿ, ಉಬೇದ ಜಾಗೀರದಾರ, ಮುಸ್ತಾಕ್ ವಾಲಿಕಾರ, ಉಮೇಶ ಶಿವಶರಣ, ಈರಣ್ಣ ರೇಶ್ಮಿ, ಈರಣ್ಣ ಅಳ್ಳಗಿ, ಬಸವರಾಜ ಬಿಜ್ಜರಗಿ, ನಾಗು ಬಿಸನಾಳ, ರುದ್ರಯ್ಯ ಕಲ್ಮಠ, ದೀಪಕ ಗುಣಕಿಮಠ,ಬಾಬುಸಾಬ ಶೇಖ, ರಾಯಪ್ಪ ಹಂಚನಾಳ, ಸುಭಾಷ್ ಬರಗಿ, ಮೃತ್ಯುಂಜಯ ಶಾಸಿ, ಅಶೋಕ ಪತ್ತಾರ, ಶ್ಯಾಮಸುಂದರ ಕುಲಕರ್ಣಿ, ಮಾಜೀದ್ ಎಂ. ಕೂಡಗಿ, ಮಂಜುನಾಥ ರೂಗಿ, ಮಲ್ಲು ಆಸಂಗಿ, ಸಿದ್ದಲಿಂಗ, ಮಧು ಕುಲಕರ್ಣಿ, ಸಂತೋಷ ಶ್ರೀಶೈಲಪ್ಪಗೋಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net