ಶಾಲೆ ಆರಂಭವಾಗುವವರೆಗೂ ಗೌರವ ಧನ ಪಾವತಿಸಿ

VJP 20-2
Published on

ವಿಜಯಪುರ: ಶಾಲೆಗಳು ಪುನಾರಂಭವಾಗುವವರೆಗೂ ಅಕ್ಷರ ದಾಸೋಹ ಕಾರ್ಮಿಕರಿಗೆ ಗೌರವ ಧನ ನೀಡಲು ಒತ್ತಾಯಿಸಿ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರು ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ ಮಾತನಾಡಿ, ಕಳೆದ ಮಾರ್ಚ್, ಏಪ್ರಿಲ್ ತಿಂಗಳ ಬಾಕಿ ವೇತನ ಕೂಡಲೇ ಜಮೆ ಮಾಡಬೇಕು. ಅಗತ್ಯ ದಿನಸಿ ವಸ್ತುಗಳ ರೇಷನ್ ಕಿಟ್ ಒದಗಿಸಬೇಕು. ಕಳೆದ 5 ತಿಂಗಳಿಂದ ಯಾವುದೇ ಗೌರವ ಧನ ಮತ್ತು ಪ್ರೋತ್ಸಾಹ ಧನ ಸಿಗದೆ ಕಾರ್ಮಿಕರು ಅತ್ಯಂತ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎಂದು ತಿಳಿಸಿದರು.
ಸಹ ಸಂಚಾಲಕಿ ಶಶಿಕಲಾ ಮ್ಯಾಗೇರಿ ಮಾತನಾಡಿ, ರಾಜ್ಯದಲ್ಲಿ ಶಾಲೆಗಳಿಗೆ ರಜೆ ಘೋಷಿಸಿದ್ದಾಗಲೂ ಅಕ್ಷರ ದಾಸೋಹ ಕಾರ್ಮಿಕರು ಮಕ್ಕಳ ಮನೆ ಮನೆಗೆ ಆಹಾರ ಧಾನ್ಯ ತಲುಪಿಸುವ ಕೆಲಸ ಮಾಡಿದ್ದಾರೆ. ನಮಗೆ ಏಪ್ರಿಲ್ 15ರವರೆಗೂ ಗೌರವ ಧನ ನೀಡಲು ಸರ್ಕಾರ ಸೂಚನೆ ನೀಡಿದೆಯಾದರೂ ಈವರೆಗೆ ಹಣ ಕಾರ್ಮಿಕರ ಖಾತೆ ಸೇರಿಲ್ಲ. ಸಾಮಾನ್ಯವಾಗಿ ಅಕ್ಷರ ದಾಸೋಹ ಕಾರ್ಮಿಕರು ಬೇಸಿಗೆಯ ರಜಾ ಅವಧಿಯಲ್ಲಿ ಗೌರವ ಧನ ಇಲ್ಲದಿರುವುದರಿಂದ ಬೇರೆ ರೀತಿಯ ಕೂಲಿ ಕೆಲಸಗಳಲ್ಲಿ ತೊಡಗಿ ನಮ್ಮ ಜೀವನ ನಿರ್ವಹಣೆ ಮಾಡಿಕೊಳ್ಳುತ್ತಿದ್ದೆವು. ಆದರೆ ಪ್ರಸ್ತುತ ಸಂದರ್ಭದಲ್ಲಿ ಯಾವುದೇ ಕೆಲಸ ಇಲ್ಲದೆ ಇರುವುದರಿಂದ ನಮ್ಮ ಕುಟುಂಬದ ದುಡಿಯುವ ಕೈಗಳಿಗೂ ಕೆಲಸಗಳು ಇಲ್ಲದಾಗಿವೆ. ಇದರಿಂದಾಗಿ ಈ ಕುಟುಂಬಗಳ ಜೀವನ ನಿರ್ವಹಣೆ ಇಲ್ಲದೆ ಅನಿವಾರ್ಯವಾಗಿ ಬೀದಿಗೆ ಬೀಳುವ ಆತಂಕದಲ್ಲಿವೆ ಎಂದರು.
ಕಾರ್ಯಕರ್ತೆ ಗಂಗೂ ಉಳಾಗಡ್ಡಿ ಮಾತನಾಡಿ, ನಾವು ಬಿಸಿಯೂಟ ಕಾರ್ಯಕರ್ತೆಯರು ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರು ಮಾಡಿ ಹಾಕುತ್ತೇವೆ ಎನ್ನುವ ಸರ್ಕಾರಕ್ಕೆ ನಾವು ಎಷ್ಟು ಸಮಯ ಈ ಕೆಲಸಕ್ಕಾಗಿ ಕಳೆಯುತ್ತೇವೆ ಮತ್ತು ಬೆಲೆ ಏರಿಕೆ ದಿನಗಳಲ್ಲಿ ನಮಗೆ ಸರ್ಕಾರ ನೀಡುತ್ತಿರುವ 2800 ರೂ. ಗೌರವ ಧನ ಯಾವುದಕ್ಕೂ ಸಾಲುವುದಿಲ್ಲ. ಆದ್ದರಿಂದ ಸರ್ಕಾರವು ಈ ಸಂಕಟಮಯ ಸಂದರ್ಭದಲ್ಲಿ ಅಕ್ಷರ ದಾಸೋಹ ಕಾರ್ಮಿಕರಿಗೆ ಕನಿಷ್ಠ ಜೀವನ ನಿರ್ವಹಣೆಗಾಗಿ ಅನುಕೂಲಗಳನ್ನು ಮಾಡಿಕೊಡಬೇಕು ಎಂದರು.
ಎಐಯುಯುಸಿ ಜಿಲ್ಲಾ ಕಾರ್ಯದರ್ಶಿ ಸುನಿಲ ಸಿದ್ರಾಮಶೆಟ್ಟಿ, ಬಿಸಿಯೂಟ ಕಾರ್ಯಕರ್ತೆಯರಾದ ಚನ್ನಮ್ಮ ಪೆಂಟದ, ಲಲಿತಾ ನಾಗರಾಳ, ರೇಣುಕಾ ಮಸೂತಿ, ದ್ರಾಕ್ಷಾಯಣಿ ಮಂಕಣಿ, ರೂಪಾ ಯರನಾಳ, ಪಾರ್ವತಿ ಕೋಲಾರ, ಪ್ರತಿಭಾ ಪೆಂಟದ, ಗೀತಾ ಕೋಲಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net