ನಾಳೆಯಿಂದ ಲಾಕ್‌ಡೌನ್ ಸಡಿಲಿಕೆ

VJP 2-1
Published on

ವಿಜಯಪುರ: ನಗರದ ಕಂಟೇನ್ಮೆಂಟ್ ವಲಯಗಳನ್ನು ಹೊರತುಪಡಿಸಿ ಜಿಲ್ಲಾದ್ಯಂತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗಸೂಚಿಯನ್ವಯ ವಿವಿಧ ಚಟುವಟಿಕೆಗೆ ಮೇ 4 ರಿಂದ ವಿನಾಯಿತಿ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶನಿವಾರ ವಿವಿಧ ಇಲಾಖೆಯ ಅಧಿಕಾರಿ ಮತ್ತು ಜಿಲ್ಲೆಯ ಶಾಸಕರೊಂದಿಗೆ ಕರೊನಾ ಮುನ್ನೆಚ್ಚರಿಕೆ ಕುರಿತು ಸಭೆ ನಡೆಸಿದ ಅವರು, ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯನ್ವಯ ಮತ್ತು ಮುಖ್ಯಮಂತ್ರಿಗಳ ನಿರ್ದೇಶನದಂತೆ ನಗರದಲ್ಲಿ ಹಂತ ಹಂತವಾಗಿ ಸಡಿಲಿಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರದಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ 4 ಕಂಟೇನ್ಮೆಂಟ್ ವಲಯಗಳಲ್ಲಿ ಈ ಹಿಂದಿನಂತೆ ಸೀಲ್‌ಡೌನ್ ಜಾರಿಯಲ್ಲಿರಲಿದ್ದು, ಜನರ ಓಡಾಟಕ್ಕೆ ಅವಕಾಶವಿರುವುದಿಲ್ಲ. ಅದರಂತೆ ವಿವಿಧ ತಂಡಗಳ ಮೂಲಕ ಅಗತ್ಯ ವಸ್ತುಗಳ ಪೂರೈಕೆ ಮತ್ತು ಸ್ವಚ್ಛತಾ ಕಾರ್ಯ ನಿರಂತರ ನಡೆಯಲಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಈವರೆಗೆ 1990 ಜನರು ವಿದೇಶ ಮತ್ತು ಇತರೆ ಕಡೆಯಿಂದ ಬಂದ ಬಗ್ಗೆ ವರದಿಯಾಗಿದ್ದು ತೀವ್ರ ನಿಗಾ ಇಡಲಾಗಿದೆ. ಈವರೆಗೆ 424 ಜನರು 28 ದಿನಗಳ ಐಸೋಲೇಷನ್ ಅವಧಿ ಪೂರ್ಣಗೊಳಿಸಿದ್ದು, 1564 ಜನರು 15 ರಿಂದ 28 ದಿನಗಳ ರಿಪೊರ್ಟಿಂಗ್ ಅವಧಿಯಲ್ಲಿದ್ದಾರೆ. ಈವರೆಗೆ 46 ಕರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, 11 ಜನ ಗುಣಮುಖರಾಗಿದ್ದಾರೆ. 2119 ಜನರ ಗಂಟಲುದ್ರವ ಮಾದರಿ ಪರೀಕ್ಷೆಯಲ್ಲಿ 1934 ಜನರ ಗಂಟಲುದ್ರವ ಮಾದರಿ ವರದಿ ನೆಗೆಟಿವ್ ಬಂದಿದೆ. 141 ಜನರ ಗಂಟಲು ದ್ರವ ಮಾದರಿ ವರದಿ ಬರಬೇಕಿದೆ. ಅದರಂತೆ ಪಾಸಿಟಿವ್ ಪ್ರಕರಣಗಳ ಸಂಪರ್ಕ ಪತ್ತೆ ಮೇಲೆ ತೀವ್ರನಿಗಾ ಇಡುವಂತೆ ಸೂಚನೆ ನೀಡಿದರು.

ಶಾಸಕ ಎಂ.ಬಿ ಪಾಟೀಲ ಮಾತನಾಡಿ, ಗೋವಾದಲ್ಲಿನ ಜಿಲ್ಲೆಯ ಕಾರ್ಮಿಕರನ್ನು ಪ್ರವೇಶಾವಕಾಶ ಕಲ್ಪಿಸುವ ಕುರಿತು ಸಲಹೆ ನೀಡಿದರು. ಮುಂದುವರಿದು ಕಂಟೇನ್ಮೆಂಟ್ ವಲಯದಲ್ಲಿ ಆರೋಗ್ಯ ಸೇತು ಆಪ್ ಕಡ್ಡಾಯಗೊಳಿಸಲು, ರತ್ನಾಪುರ ಕಂಟೆನ್ಮೇಂಟ್ ಭಾಗದ ಎನ್‌ಆರ್‌ಇಸಿಜಿಎ ಅಡಿ ಕಾರ್ಡ್ ಇದ್ದವರಿಗೆ ತಲಾ 2000 ರೂ. ಸಹಾಯಧನ ಒದಗಿಸುವಂತೆ ಮಾಡುವ ಕುರಿತು ಸಲಹೆ ನೀಡಿದರು.

ಶಾಸಕ ಶಿವಾನಂದ ಪಾಟೀಲ ಅವರು, ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಿಭಾಗ ಮಾಡಿ ಕರೊನಾ ಹೊರತು ಪಡಿಸಿ ಇತರೆ ಕಾಯಿಲೆಗಳ ಚಿಕಿತ್ಸೆಗೆ ಅವಕಾಶ ಕಲ್ಪಿಸಬೇಕು. ದ್ವಿಚಕ್ರ ವಾಹನಗಳಿಗೆ ಅವಕಾಶ ಕಲ್ಪಿಸಬೇಕು, ನಗರ, ಜಿಲ್ಲೆಯ ಕಾರ್ಮಿಕರಿಗೆ ತಲಾ 2000 ರೂ. ಸಹಾಯಧನ ಒದಗಿಸುವಂತೆ ಕ್ರಮ ಕೈಗೊಳ್ಳಬೇಕು. ಕಟ್ಟಡ, ಕೃಷಿ, ರೈತರಿಗೆ ಅವಶ್ಯಕ ವಿನಾಯತಿ ನೀಡಲು ಸಲಹೆ ನೀಡಿದರು.

ಶಾಸಕ ಯಶವಂತರಾಯಗೌಡ ಪಾಟೀಲ ಅವರು, ರೈತರ ತೋಟಗಾರಿಕೆ ಬೆಳೆಗಳನ್ನು ಆವರ್ತನಿಧಿಯಡಿ ತಂದು ಬೆಂಬಲ ಬೆಲೆ ಕಲ್ಪಿಸಬೇಕು. ಮಹಾರಾಷ್ಟ್ರ ರಾಜ್ಯದ ಉಜನಿ ಜಲಾಶಯದಿಂದ ಹೆಚ್ಚುವರಿ ನೀರು ಕಲ್ಪಿಸಬೇಕು ಮತ್ತು ರೈತರ ಬೆಳೆಗಳಿಗೆ ಉತ್ತಮ ಬೆಲೆ ಮತ್ತು ಮಾರಾಟ ವ್ಯವಸ್ಥೆ ಕಲ್ಪಿಸಲು ಸಲಹೆ ನೀಡಿದರು. ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹಾಗೂ ಸೋಮನಗೌಡ ಪಾಟೀಲ (ಶಾಸನೂರ) ಮತ್ತು ಎಂ.ಸಿ ಮನಗೂಳಿ ಅವರು, ಮಹಾರಾಷ್ಟ್ರದಲ್ಲಿರುವ ಜಿಲ್ಲೆಯ ಕಾರ್ಮಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಬೇಕು. ರೈತರ ಸಂಕಷ್ಟಗಳಿಗೆ ನೆರವಾಗಬೇಕು ಎಂದು ಸಚಿವರ ಗಮನಕ್ಕೆ ತಂದರು.
ಶಾಸಕ ಅರುಣ ಶಹಾಪುರ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪೊಲೀಸ್ ಅಧೀಕ್ಷಕ ಅನುಪಮ್ ಅಗರವಾಲ್, ಜಿಪಂ ಸಿಇಒ ಗೋವಿಂದ ರೆಡ್ಡಿ ಮತ್ತಿತರರಿದ್ದರು.

ಪ್ರಯೋಗಾಲಯ ಆರಂಭ

ನಗರದಲ್ಲಿ ಇಂದಿನಿಂದ ಶ್ವಾಸಕೋಶ ತೊಂದರೆ ಸಂಬಂಧಿತ ಪ್ರಕರಣಗಳ ಚಿಕಿತ್ಸೆಗೆ ಅನುಕೂಲವಾಗುವಂತೆ ಗಂಟಲುದ್ರವ ಮಾದರಿ ಪರೀಕ್ಷಾ ಪ್ರಯೋಗಾಲಯ ಆರಂಭಿಸಲಾಗುತ್ತಿದೆ. ಇದರಿಂದ ದಿನಕ್ಕೆ 25 ರಿಂದ 30 ಗಂಟಲು ದ್ರವಗಳ ಮಾದರಿ ಪರೀಕ್ಷೆಗೆ ಸಹಕಾರಿಯಾಗಲಿದೆ. ಅದರಂತೆ ಜಿಲ್ಲಾಸ್ಪತ್ರೆ ಕರೊನಾ ಆಸ್ಪತ್ರೆಯಾಗಿ ಪರಿವರ್ತಿಸಿರುವುದರಿಂದ ಅನ್ಯ ವೈದ್ಯಕೀಯ ಸೇವೆ ಕಲ್ಪಿಸಲು ಪ್ರತ್ಯೇಕ ವಿಭಾಗ ತೆರೆಯುವ ಕುರಿತಂತೆ ಕ್ರಮಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಗೋವಾ ಕಾರ್ಮಿಕರಿಗೆ ಅವಕಾಶ

ಮುಖ್ಯಮಂತ್ರಿಗಳ ನಿರ್ದೇಶನದಂತೆ ಕಂಟೇನ್ಮೆಂಟ್ ವಲಯ ಮತ್ತು ವಿಜಯಪುರ ನಗರ ಹೊರತುಪಡಿಸಿ ಜಿಲ್ಲಾದ್ಯಂತ ವ್ಯಾಪಾರ ವಹಿವಾಟು, ಕೃಷಿ, ತೋಟಗಾರಿಕೆ, ಎಪಿಎಂಸಿ ಚಟುವಟಿಕೆ, ಬಸ್‌ಗಳನ್ನು ಹೊರತುಪಡಿಸಿ ನಾಲ್ಕುಚಕ್ರ, ದ್ವಿಚಕ್ರ ವಾಹನ (ಕಡ್ಡಾಯವಾಗಿ ಮಾಸ್ಕ ಧರಿಸಿ, ಅಗತ್ಯತೆಗೆ ಅನುಗುಣವಾಗಿ) ಓಡಾಟಕ್ಕೆ ಮಾತ್ರ ಅವಕಾಶ ಇರಲಿದೆ. ವೈದ್ಯಕೀಯ ಚಿಕಿತ್ಸೆಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದ ಅವರು ಮಹಾರಾಷ್ಟ್ರ ಹೊರತುಪಡಿಸಿ ಗೋವಾದಿಂದ ಬರುವ ಕಾರ್ಮಿಕರಿಗೆ ಪ್ರವೇಶಾವಕಾಶ ಕಲ್ಪಿಸುವ ಕುರಿತು ಅವಶ್ಯಕ ಕ್ರಮ ಕೈಗೊಳ್ಳುವುದಾಗಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net