ಏಪ್ರಿಲ್ ಕೊನೆಯ ವಾರದವರೆಗೆ ನೀರು ಹರಿಸಿ

VJP 17-1
Published on

ವಿಜಯಪುರ: ಆಲಮಟ್ಟಿ ಅಣೆಕಟ್ಟೆಯಿಂದ ಕಾಲುವೆಗಳಿಗೆ ಏಪ್ರಿಲ್ ಕೊನೆಯ ವಾರದವರೆಗೂ ನೀರು ಹರಿಸಲು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಪಿ.ಸುನೀಲಕುಮಾರಗೆ ಮನವಿ ಸಲ್ಲಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಕೃಷ್ಣಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಹಿಂಗಾರು ಹಂಗಾಮಿನ ಬೆಳೆಗೆ ಹಾಗೂ ಕುಡಿಯಲು ನೀರು ಸಂಗ್ರಹಕ್ಕಾಗಿ ವಾರಾಬಂದಿ ಪದ್ಧತಿಯಡಿ ಕೆರೆಗೆ ನೀರು ತುಂಬಿಸಲು ತೀರ್ಮಾನಿಸಲಾಗಿದೆ. ಎಲ್‌ಬಿಎಸ್ ಅಣೆಕಟ್ಟೆಯಿಂದ ಹಿಂಗಾರು ಹಂಗಾಮಿಗೆ 8 ದಿನ ನೀರು ಹರಿಸಿ 7 ದಿನ ನೀರು ಬಂದ್ ಮಾಡಲಾಗುವುದೆಂದು ಸಭೆಯಲ್ಲಿ ತೀರ್ಮಾನಿಸಿದ್ದು, ಅದರಂತೆ ಬಸವಸಾಗರ ಜಲಾಶಯದ ವ್ಯಾಪ್ತಿಯಲ್ಲಿ ಬರುವ ಕಾಲುವೆಗೆ 14 ದಿನ ನೀರು ಹರಿಸಿ 7 ದಿನ ಬಂದ್ ಮಾಡುವ ಪದ್ಧತಿಗೆ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ಜಿಲ್ಲೆಗೆ ಅನ್ಯಾಯವಾಗಿದೆ ಎಂದರು.

ಯಾದಗಿರಿ ಜಿಲ್ಲೆಯ ಬಸವಸಾಗರ ಜಲಾಶಯದ ಹಿನ್ನೀರು ಸಂಗ್ರಹವಾಗಲು ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಅಂದಾಜು 35 ಗ್ರಾಮಗಳು ಬಾಧಿತಗೊಂಡಿವೆ. ಅವಳಿ ಜಲಾಶಯಗಳಲ್ಲಿ ನೀರು ಸಂಗ್ರಹ ಮಾಡಿಕೊಳ್ಳಲು ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ, ಹುನಗುಂದ, ಜಮಖಂಡಿ, ಬೀಳಗಿ ಹಾಗೂ ವಿಜಯಪುರ ಜಿಲ್ಲೆಯ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ಬಸವನಬಾಗೇವಾಡಿ, ಬಬಲೇಶ್ವರ, ತಾಳಿಕೋಟೆ, ನಿಡಗುಂದಿ ತಾಲೂಕು ಸೇರಿದಂತೆ ಅಖಂಡ ವಿಜಯಪುರ ಜಿಲ್ಲೆಯ ಜನರು ಅಪಾರ ತ್ಯಾಗ ಮಾಡಿದ್ದಾರೆ. ಬಾಧಿತ ಜಿಲ್ಲೆಯವರೇ ಆಗಿರುವ ಉಪ ಮುಖ್ಯಮಂತ್ರಿ ಹಾಗೂ ನೀರಾವರಿ ಸಲಹಾ ಸಮಿತಿ ಸದಸ್ಯ ಗೋವಿಂದ ಕಾರಜೋಳ ಅವರ ಅಧ್ಯಕ್ಷತೆಯಲ್ಲಿ ನಡೆದ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯದಿಂದ ಜಿಲ್ಲೆಗೆ ಅನ್ಯಾಯ ಆಗಿದೆ. ಆದ್ದರಿಂದ ಅನ್ಯಾಯವನ್ನು ಕೂಡಲೇ ಸರಿಪಡಿಸಿ ನಾರಾಯಣಪುರ ಬಸವಸಾಗರ ಜಲಾಶಯ ವ್ಯಾಪ್ತಿಯ ಒಳಗೆ ನೀರು ಹರಿಸಲು ಯಾವ ರೀತಿ ಕ್ರಮ ಕೈಗೊಂಡಿದ್ದಾರೆಯೋ ಅದೇ ರೀತಿ ಲಾಲ್‌ಬಹಾದೂರ್ ಶಾಸಿ ಜಲಾಶಯದ ವ್ಯಾಪ್ತಿಗೆ ಬರುವ ಎಲ್ಲ ಕಾಲುವೆಗಳಿಗೆ ನೀರು ಹರಿಸಲು ತೀರ್ಮಾನ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕೆಬಿಜೆಎನ್‌ಎಲ್ ಕಚೇರಿ ಆವರಣದಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ಪಾಂಡು ಹ್ಯಾಟಿ, ಸದಾಶಿವ ಬರಟಗಿ, ಸಿದರಾಮ ಅಂಗಡಗೇರಿ, ಕೃಷ್ಣಪ್ಪ ಬೊಮ್ಮರೆಡ್ಡಿ, ಈರಪ್ಪ ತೇಲಿ, ನಂದುಗೌಡ ಬಿರಾದಾರ, ಚಂದ್ರಾಮ ತೆಗ್ಗಿ, ಶೇಖಪ್ಪ ಕರಾಬಿ, ದಾವಲಸಾಬ ನದಾ, ಸಂಗಪ್ಪ ಪಡಸಲಗಿ, ಗುರಲಿಂಗಪ್ಪ ಪಡಸಲಗಿ, ಶಿವಪ್ಪ ಸುಂಟ್ಯಾನ, ರಾಜು ವಾಲಿಕಾರ, ಚಂದ್ರಾಮ ಹಿಪ್ಪಲಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net