

ವಿಜಯಪುರ: ಸೋಂಕು ದೃಢಪಡುವ ಮುನ್ನವೇ ಮೃತ ಪಟ್ಟಿದ್ದ ವ್ಯಕ್ತಿ ಪರೀಕ್ಷಾ ವರದಿ ಪಾಸಿಟಿವ್ ಎಂದಾಗಿದ್ದು ಆ ಮೂಲಕ ಜಿಲ್ಲೆಯಲ್ಲಿ ಕರೊನಾ ಮೊದಲ ಬಲಿ ತೆಗೆದುಕೊಂಡಿದೆ.
ಕಳೆದೆರಡು ದಿನಗಳ ಹಿಂದಷ್ಟೇ ಎರಡು ಕುಟುಂಬಗಳ ಒಟ್ಟು ಆರು ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದವು. ಆ ಪೈಕಿ ವೃದ್ಧೆಯೋರ್ವ ಪತಿಗೂ ಸೋಂಕು ತಗುಲಿದೆ ಎನ್ನಲಾಗಿದ್ದು ಆತನನ್ನು ಚಿಕಿತ್ಸೆಗೊಳಪಡಿಸಲಾಗಿತ್ತು. ಆತನ ಪರೀಕ್ಷಾ ವರದಿ ಬರುವ ಮುನ್ನವೇ ಆತ ಮೃತಪಟ್ಟಿದ್ದ. ಇದೀಗ ಆತನಿಗೂ ಸೋಂಕು ತಗುಲಿರುವುದು ಸಾಬೀತಾಗಿದೆ.
ಇನ್ನುಳಿದ ಆರು ಜನರ ಆರೋಗ್ಯ ಸ್ಥಿರವಾಗಿದೆ. ಮೃತ ವ್ಯಕ್ತಿಯ ಪತ್ನಿ ಅಂದರೆ ವೃದ್ಧೆಗೆ ಈ ಮೊದಲೇ ಆರೋಗ್ಯ ಸರಿಯಾಗಿರಲಿಲ್ಲ. ಎರಡು ಬಾರಿ ಹೃದಯಾಘಾತಕ್ಕೂ ಒಳಗಾಗಿದ್ದಳು. ಅದಾಗ್ಯೂ ನುರಿತ ತಜ್ಞರಿಂದ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸ್ಪಷ್ಟಪಡಿಸಿದ್ದಾರೆ. ಇನ್ನುಳಿದವರ ಸ್ಥಿತಿಯೂ ಚೆನ್ನಾಗಿದೆ. ಎಲ್ಲೆಡೆ ಸಿಸಿ ಕ್ಯಾಮೆರಾ ಅಳವಡಿಸಿ ಕ್ಷಣ ಕ್ಷಣದ ಮಾಹಿತಿ ಪಡೆಯಲಾಗುತ್ತಿದೆ. ನುರಿತ ಖಾಸಗಿ ತಜ್ಞರ ಕಮಿಟಿ ರಚಿಸಿ ಅವರಿಂದಲೂ ನೆರವು ಪಡೆಯುತ್ತಿರುವುದಾಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಜಿಲ್ಲೆಯಲ್ಲಿ 626 ಜನರ ಮೇಲೆ ನಿಗಾ ಇರಿಸಲಾಗಿದೆ. 348 ಜನ ಗೃಹಬಂಧನದಲ್ಲಿ ಇದ್ದಾರೆ. 282 ಮಾದರಿ ಸಂಗ್ರಹಿಸಲಾಗಿದೆ. ಅದರಲ್ಲಿ 155 ನೆಗೆಟಿವ್, ಏಳು ಪಾಸಿಟಿವ್ ಬಂದಿವೆ. 120 ಪರೀಕ್ಷಾ ವರದಿ ಬರಬೇಕಿದೆ. ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಂದಾಜು 300 ಜನರ ಪ್ರಾಥಮಿಕ ಮಾಹಿತಿ ಕಲೆ ಹಾಕಲಾಗುತ್ತಿದೆ. ಸೋಂಕಿತರು ಚಿಕಿತ್ಸೆ ಪಡೆದ ಐದು ಖಾಸಗಿ ಆಸ್ಪತ್ರೆಗಳ ಸುಮಾರು 74 ವೈದ್ಯಕೀಯ ಸಿಬ್ಬಂದಿಯನ್ನು ಸಹ ತಪಾಸಣೆಗೆ ಒಳಪಡಿಸಲಾಗಿದೆ. ಅವರ ಗಂಟಲು ದ್ರವ ತೆಗೆದು ಪರೀಕ್ಷೆಗೆ ಕಳುಹಿಸಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಪಾಸಿಟಿವ್ ಕೇಸ್ ಬಂದ ಬಳಿಕ ಅದರಲ್ಲೂ ಒಂದು ಮರಣವಾದ ನಂತರ ಸ್ಥಳೀಯ ಸಂಸ್ಥೆಗಳಿಗೆ ವಿಶೇಷ ಆದೇಶ ನೀಡಲಾಗಿದ್ದು, ಯಾವುದೇ ರೀತಿ ನಿಧನವಾದಲ್ಲಿ ಅಂಥವರ ಮಾಹಿತಿಯನ್ನು ಸಂಬಂಧಿಸಿದವರ ಗಮನಕ್ಕೆ ತರಬೇಕು. ಸ್ಮಶಾನ ಅಥವಾ ಖಬರಸ್ಥಾನ ಯಾವುದೇ ಇರಲಿ ಹೂಳುವ ಮುನ್ನ ವಿಚಾರಣಾ ವರದಿ ಸಲ್ಲಿಸಬೇಕು. ಸರ್ಕಾರದ ನಿರ್ದೇಶನದಂತೆ ಆದೇಶ ಹೊರಡಿಸಲಾಗಿದ್ದು ಇಂದಿನಿಂದ ಆದೇಶ ಜಾರಿಯಾಗಲಿದೆ ಎಂದರು.
ಈಗಾಗಲೇ ಎಪಿಎಂಸಿಯಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನೂ ಐದು ಕಡೆ ತರಕಾರಿ, ಹಣ್ಣು ಹಂಪಲು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು. ಸಿಂದಗಿ ಬೈಪಾಸ್, ಸೊಲ್ಲಾಪುರ ಬೈಪಾಸ್, ಸ್ಯಾಟ್‌ಲೈಟ್ ಬಸ್ ನಿಲ್ದಾಣ, ಬಬಲೇಶ್ವರ- ನವಬಾಗ ರಸ್ತೆ, ಸೇಂಟ್ ಜೋಸೆಫ್ ಸ್ಕೂಲ್ ಹತ್ತಿರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು. ಕರೊನಾ ಪಾಸಿಟಿವ್ ಬಂದ ಬಳಿಕ ಹಳ್ಳಿಗಳಿಂದ ನಗರಕ್ಕೆ ಬರುವವರು ಹಿಂಜರಿಯುತ್ತಿದ್ದಾರೆ. ಆದರೆ ಯಾವುದಕ್ಕೂ ಹೆದರುವ ಅಗತ್ಯವಿಲ್ಲ. ಹಳ್ಳಿಗರು ಭಯ ಪಡಬೇಕಿಲ್ಲ. ಎಲ್ಲರ ಸುರಕ್ಷತೆ ನಮ್ಮ ಕೈಯಲ್ಲಿದೆ. ಕೆಲವು ಹಳ್ಳಿಗರು ನಗರಕ್ಕೆ ಹೋಗಿ ಬರುವವರ ಪ್ರವೇಶಕ್ಕೆ ನಿರ್ಬಂಧ ಹೇರುತ್ತಿದ್ದು ಆ ಬಗ್ಗೆ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡುವುದಾಗಿ ಜಿಲ್ಲಾಧಿಕಾರಿ ಪಾಟೀಲ ಪ್ರತಿಕ್ರಿಯಿಸಿದರು.
ನಗರದ 25 ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ಗೆ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಪಡೆಯುತ್ತಿದ್ದವರೆಲ್ಲರೂ ಖಾಸಗಿ ಆಸ್ಪತ್ರೆಯಲ್ಲಿ ಸೌಲಭ್ಯ ಪಡೆಯಬಹುದಾಗಿದೆ. ತಾಳಿಕೋಟೆಯ ಕ್ಯಾನ್ಸರ್ ರೋಗಿಯ ಚಿಕಿತ್ಸೆಗಾಗಿ ತೆರಳಲು ಅಂದೇ ಪಾಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಸೋಂಕಿತ ಮಹಿಳೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಖಂಡನೀಯ. ಯಾರು ವಿಡಿಯೋ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ನಿರ್ದಿಷ್ಟ ವ್ಯಕ್ತಿ ಹೆಸರು ಹೇಳಿದರೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು. ಇನ್ನು ಕೆಮ್ಮು ನೆಗಡಿ, ಜ್ವರ ಲಕ್ಷಣಗಳುಳ್ಳವರಿಗೆ ಆಯುರ್ವೇದ ಹಾಗೂ ಯುನಾನಿ ವೈದ್ಯರು ಚಿಕಿತ್ಸೆ ನೀಡುವ ಹಾಗಿಲ್ಲ. ಹಾಗೆ ನೀಡಿದರೆ ಮುಂದೆ ಅವರನ್ನೇ ಹೊಣೆಗಾರರನ್ನಾಗಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಪಾಟೀಲ ಎಚ್ಚರಿಸಿದರು.
ಜಿಪಂ ಸಿಇಒ ಗೋವಿಂದ ರೆಡ್ಡಿ ಇದ್ದರು.
ಸೋಂಕಿತ ಎರಡು ಕುಟುಂಬಗಳ ಸದಸ್ಯರು ಮಹಾರಾಷ್ಟ್ರದ ಜತೆ ಸಂಪರ್ಕ ಹೊಂದಿದ್ದು ಗೊತ್ತಾಗಿದೆ. ಈಗಾಗಲೇ ಮಹಾರಾಷ್ಟ್ರ ಪೊಲೀಸರಿಗೆ ಫ್ಯಾಕ್ಸ್ ಮುಖಾಂತರ ವರದಿ ನೀಡಲಾಗಿದೆ. ನಿಗದಿತ ಸ್ಥಳ ತಪಾಸಣೆ ನಡೆಸಲು ತಿಳಿಸಲಾಗಿದೆ.
ಅನುಪಮ್ ಅಗರವಾಲ್, ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ