

ವಿಜಯಪುರ: ಜಿಲ್ಲೆಯಿಂದ ಗೋವಾ ಹಾಗೂ ಮಹಾರಾಷ್ಟ್ರಗಳಿಗೆ ವಲಸೆ ಹೋಗಿರುವವರಿಗೆ ಸೂಕ್ತ ವಸತಿ, ಆಹಾರ ಮತ್ತು ನೀರಿನ ಸೌಲಭ್ಯ ಕಲ್ಪಿಸಲು ಆಯಾ ರಾಜ್ಯಗಳ ಆಡಳಿತ ವರ್ಗಕ್ಕೆ ಮನವಿ ಮಾಡಿರುವುದಾಗಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ರಾಷ್ಟ್ರದಾದ್ಯಂತ ಸರ್ಕಾರ ಲಾಕ್‌ಡೌನ್ ಜಾರಿಗೊಳಿಸಿರುವ ಹಿನ್ನಲೆಯಲ್ಲಿ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಜಿಲ್ಲೆಯಿಂದ ವಲಸೆ ಹೋಗಿರುವ ಜನರ ಬಗ್ಗೆ ಗಮನಕ್ಕೆ ಬಂದಿದೆ. ಅಂಥವರಿಗೆ ವಸತಿ ಮತ್ತು ಆಹಾರದ ಸೌಲಭ್ಯ ಕಲ್ಪಿಸಲು ಈಗಾಗಲೇ ಆಯಾ ಜಿಲ್ಲಾಧಿಕಾರಿಗಳಿಗೆ ಕೋರಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರಕ್ಕೂ ಈ ಕುರಿತು ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಲಾಕ್‌ಡೌನ್ ಹಿನ್ನೆಲೆ ಎಲ್ಲ ಗಡಿ ಭಾಗಗಳಲ್ಲಿ ಪ್ರಯಾಣಿಕರಿಗೆ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ಆಯಾ ಸ್ಥಳೀಯ ಅಧಿಕಾರಿಗಳೇ ಇಂಥವರ ಬಗ್ಗೆ ನಿಗಾ ವಹಿಸಲಿದ್ದಾರೆ. ನಿಷೇಧಾಜ್ಞೆಯಿಂದ ಆಹಾರ ಮತ್ತು ನೀರಿಗಾಗಿ ತೊಂದರೆ ಪಡುವುದನ್ನು ಅರಿತು ಜಿಲ್ಲೆಯಲ್ಲಿರುವ ಅಲೆಮಾರಿ ಜನಾಂಗದವರು ಸೂಕ್ತ ಮಾಹಿತಿ ಸಂಗ್ರಹಿಸಿ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಆಯಾ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ತಹಸೀಲ್ದಾರ್‌ರು, ಆಹಾರ, ಕುಡಿಯುವ ನೀರು, ದವಸ ಧಾನ್ಯಗಳನ್ನು ಏಪ್ರಿಲ್ 14ರ ವರೆಗೆ ಪೂರೈಸಲು ಸೂಚಿಸಲಾಗಿದೆ. ಯಾವುದೇ ರೀತಿಯಲ್ಲಿ ದೂರು ಬರದಂತೆ ಎಚ್ಚರಿಕೆ ವಹಿಸಲು ಸಹ ಸೂಚಿಸಲಾಗಿದೆ ಎಂದು ತಿಳಿಸಿದರು.
ಬಿಪಿಎಲ್ ಪಡಿತರದಾರರಿಗೆ ಏಪ್ರಿಲ್ 4 ಅಥವಾ 5 ರಿಂದ ಬೇಳೆಕಾಳು ಹಾಗೂ ದವಸಧಾನ್ಯಗಳ ವಿತರಣೆಗೆ ಸೂಚಿಸಲಾಗಿದೆ. ಆಯಾ ಗ್ರಾಮಗಳ ವ್ಯಾಪ್ತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ನಿರ್ವಹಿಸಲು ಆಯಾ ಗ್ರಾಮಮಟ್ಟದ ಸಮಿತಿಗಳಿಗೆ ಜವಾಬ್ದಾರಿ ನೀಡಲಾಗಿದ್ದು, ಸಾರ್ವಜನಿಕರು ಕೂಡ ಗುಂಪು-ಗುಂಪಾಗಿ, ಜನಸಂದಣಿಯಿಂದ ಪಡೆಯದೆ ಅಂತರ ಕಾಯ್ದುಕೊಂಡು ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.
ಪಲ್ಸ್ ಪೊಲಿಯೋ ಮಾದರಿಯಲ್ಲಿ ನಗರ ಪಟ್ಟಣಗಳ ಅತಿ ಹೆಚ್ಚು ಅಪಾಯಕಾರಿ ವಲಯಗಳನ್ನು ಗುರುತಿಸಿ ಕರೊನಾ ಪ್ರಭಾವಿತ ಜಿಲ್ಲೆ ಹಾಗೂ ರಾಜ್ಯಗಳಿಂದ ಆಗಮಿಸಿರುವವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಅದರಂತೆ ಗ್ರಾಮಗಳಲ್ಲಿ ಮಾಹಿತಿ ಸಂಗ್ರಹಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಲಾಕ್‌ಡೌನ್ ಪರಿಣಾಮಕಾರಿ ಅನುಷ್ಠಾನದ ಉದ್ದೇಶದಿಂದ ಸಾರ್ವಜನಿಕರು ಹೊರಬರದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಸಾರ್ವಜನಿಕರು ಕೂಡ ಅಗತ್ಯ ವಸ್ತುಗಳು ಮತ್ತು ತರಕಾರಿ, ಹಣ್ಣು, ಹಾಲು ಖರೀದಿಸಲು ದ್ವಿಚಕ್ರವಾಹನ ಬಳಸಿ ಹೊರಗೆ ಬರದಿರಲು ತಿಳಿಸಿರುವ ಅವರು, ಮನೆ ಮನೆಗೆ ಬರುವಂತಹ ತಳ್ಳುವ ಗಾಡಿಗಳ ಮೂಲಕ ಖರೀದಿಗೆ ಸೂಚಿಸಿದ್ದು, ಈಗಾಗಲೇ ನಗರದಾದ್ಯಂತ 550 ತಳ್ಳುವ ಗಾಡಿಗಳಿಗೆ ಮತ್ತು ಹಾಪ್‌ಕಾಮ್ಸ್ ವಾಹನಗಳಿಗೆ ಅನುಮತಿ ನೀಡಲಾಗಿದೆ. ಪೊಲೀಸ್ ಇಲಾಖೆಯಿಂದ ದ್ವಿಚಕ್ರ ವಾಹನ ವಶಕ್ಕೆ ಪಡೆಯಲು ಸೂಚಿಸಲಾಗಿದೆ ಎಂದರು.
ಜಿಲ್ಲಾದ್ಯಂತ ಯಾವುದೇ ರೀತಿಯ ಕೃಷಿ ಚಟುವಟಿಕೆಗಳಿಗೆ ನಿರ್ಬಂಧ ಇರುವುದಿಲ್ಲ. ಕೃಷಿ ಬೆಳೆಗಳ ಹಾಗೂ ತೋಟಗಾರಿಕೆ ಹಣ್ಣು ಹಂಪಲುಗಳ ಮಾರಾಟ, ಖರೀದಿ ಮತ್ತು ವಹಿವಾಟಿಗೆ ಯಾವುದೇ ರೀತಿಯಲ್ಲಿ ನಿರ್ಬಂಧ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.
ಕೃಷಿ ಚಟುವಟಿಕೆಗೆ ಯಾವುದೇ ನಿರ್ಬಂಧ ಇಲ್ಲದಿದ್ದರು ಕೂಡ ಗುಂಪು-ಗುಂಪಾಗಿ ಕೃಷಿ ಚಟುವಟಿಕೆ ನಡೆಸಲು ನಿರ್ಬಂಧಿಸಲಾಗಿದೆ. ಕೃಷಿ ಉತ್ಪನ್ನ ಮಾರಾಟ ಕೇಂದ್ರಗಳಲ್ಲಿಯೂ ಸಾಮಾಜಿಕ ಅಂತರದೊಂದಿಗೆ ಚಟುವಟಿಕೆಗಳನ್ನು ನಿರ್ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕರೊನಾ ಪರಿಸ್ಥಿತಿಯ ದುರುಪಯೋಗ ಪಡೆಸಿಕೊಂಡು ಯಾರಾದರು ಒತ್ತಾಯ ಪೂರ್ವಕವಾಗಿ ಮನೆ ಬಾಡಿಗೆ ವಸೂಲಿ ಹಾಗೂ ಮನೆ ಖಾಲಿಗೆ ಸೂಚಿಸಿದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಅಂತಹವರ ಬಗ್ಗೆ ದೂರುಗಳಿದ್ದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತರಬಹುದಾಗಿದೆ ಎಂದು ಹೇಳಿದರು.
ಜಿಪಂ ಸಿಇಒ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್, ಡಿಎಚ್‌ಒ ಮಹೇಂದ್ರ ಕಾಪಸೆ, ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿ ಮುಕುಂದ ಗಲಗಲಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಶರಣಪ್ಪ ಕಟ್ಟಿ, ಆಹಾರ ಇಲಾಖೆ ಜಂಟಿ ನಿರ್ದೇಶಕಿ ಸುರೇಖಾ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಮಲ್ಲನಗೌಡ ಬಿರಾದಾರ, ಕುಷ್ಟರೋಗ ನಿಯಂತ್ರಾಧಿಕಾರಿ ಸಂಪತಕುಮಾರ ಗುಣಾರೆ, ಡಾ. ಧಾರವಾಡಕರ, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಪ್ರಾಣೇಶ ಜಾಹಗೀರದಾರ ಮತ್ತಿತರರಿದ್ದರು.
ಮಂಗಳವಾರ ಪೂರ್ವಾಹ್ನದವರೆಗೆ ಜಿಲ್ಲೆಯಲ್ಲಿ 332 ಜನರು ವಿದೇಶದಿಂದ ಆಗಮಿಸಿರುವ ಬಗ್ಗೆ ವರದಿಯಾಗಿದೆ. 57 ಜನ 28 ದಿನಗಳ ಅವಧಿ ಪೂರ್ಣಗೊಳಿಸಿದ್ದಾರೆ. 241 ಜನ 15 ರಿಂದ 28 ದಿನಗಳ ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ. 34 ಜನ ಗೃಹಬಂಧನದಲ್ಲಿದ್ದಾರೆ. ಈವರೆಗೆ ಕಳುಹಿಸಿದ 12 ಪ್ರಕರಣಗಳ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.
ವೈ.ಎಸ್. ಪಾಟೀಲ, ಜಿಲ್ಲಾಧಿಕಾರಿ