

ವಿಜಯಪುರ: ತಾಲೂಕಿನ ಮದಬಾವಿ ಹಾಗೂ ಬುರಣಾಪೂರ ವ್ಯಾಪ್ತಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ವಿಮಾನ ನಿಲ್ದಾಣಕ್ಕೆ ಸಮೀಪಿಸುವ ಕಾಲುವೆ ಪಕ್ಕದ ಸಂಪರ್ಕ ರಸ್ತೆ, ನೀರು ಸರಬರಾಜು ಸೌಲಭ್ಯ ಹಾಗೂ 1000 ಕೆವಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಗೆ ಸಂಬಂಧಪಟ್ಟಂತೆ ತಕ್ಷಣ ಖರ್ಚು ವೆಚ್ಚ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ‘ಅಪ್ರೋಚ್ ರೋಡ್’ ಕುರಿತು ತಕ್ಷಣ ಭೂಸ್ವಾಧೀನ, ರಸ್ತೆ ಖರ್ಚು ವೆಚ್ಚ ಕುರಿತಂತೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಉಪವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರ್‌ರಿಗೆ ಸೂಚಿಸಿದರು.
ಅದರಂತೆ ಈ ಹಿಂದೆ 2012ರಲ್ಲಿ ನೀರು ಸರಬರಾಜು ಇಲಾಖೆಯಿಂದ ವಿಮಾನ ನಿಲ್ದಾಣಕ್ಕೆ ಅವಶ್ಯಕವಿರುವ ನೀರಿನ ಸರಬರಾಜು ಕುರಿತು 15 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸದ್ಯದ ಪರಿಸ್ಥಿತಿಗೆ ಪೂರಕವಾಗಿ ಜಲಸಂಪನ್ಮೂಲದ ಶಾಶ್ವತ ಪರಿಹಾರದ ಬಗ್ಗೆ ಖರ್ಚು, ವೆಚ್ಚ ವರದಿ ಮತ್ತು ಅಗತ್ಯವಿರುವ ನೀರಿನ ಪ್ರಮಾಣದ ಬಗ್ಗೆ ಪರಿಶೀಲನಾ ವರದಿ ಸಹ ಸಲ್ಲಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು ಈ ಕುರಿತು ಲೋಕೋಪಯೋಗಿ ಹಾಗೂ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕೆಂದರು.
ವಿಮಾನ ನಿಲ್ದಾಣಕ್ಕೆ 1000 ಕೆವಿ ವಿದ್ಯುತ್ ವಿತರಣಾ ಕೇಂದ್ರದ ಅಗತ್ಯತೆ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ತಕ್ಷಣ ವಿತರಣಾ ಕೇಂದ್ರ ಖರ್ಚು, ವೆಚ್ಚ ವರದಿ ಸಲ್ಲಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಒಟ್ಟಾರೆ ವಿಮಾನ ನಿಲ್ದಾಣಕ್ಕೆ ಪರ್ಯಾಯ ರಸ್ತೆಗಾಗಿ ಭೂಸ್ವಾಧೀನ, ರಸ್ತೆ ಉದ್ದಳತೆ, ಅಪ್ರೋಚ್ ರಸ್ತೆ, ವಿದ್ಯುತ್, ನೀರಿನ ಸೌಲಭ್ಯ ಕಲ್ಪಿಸುವ ಕುರಿತು ಮುಂದಿನ ಹತ್ತು ದಿನಗಳ ಅವಧಿಯಲ್ಲಿ ಖರ್ಚು, ವೆಚ್ಚಗಳ ವರದಿಗಳನ್ನು ಸಲ್ಲಿಸಬೇಕು ಎಂದರು.
ಮದಬಾವಿ ಹಾಗೂ ಬುರಾಣಪುರ ಗ್ರಾಮಗಳ ಮಧ್ಯೆದಲ್ಲಿ ವಿಮಾನ ನಿಲ್ದಾಣಕ್ಕಾಗಿ ಕೆಐಎಡಿಬಿಯಿಂದ 727 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಎಟಿಆರ್-72 ವಿಮಾನ ನಿಲ್ದಾಣ ಹಾರಾಟಕ್ಕಾಗಿ ಒಟ್ಟು 220 ಕೋಟಿ ರೂ.ಗಳನ್ನು ನಿಗದಿಪಡಿಸಿ, ಸರ್ಕಾರದಿಂದ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕಾಮಗಾರಿಯನ್ನು ಎರಡು ಹಂತದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಮೊದಲನೇ ಹಂತದ ಕಾಮಗಾರಿಗಳಿಗೆ 95 ಕೋಟಿ ರೂ. ಮಂಜೂರಾತಿ ದೊರೆತಿದೆ. ತಾಂತ್ರಿಕ ಮಂಜೂರಾತಿಯನ್ನೂ ನೀಡಲಾಗಿದ್ದು, ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ. ಅ. 22 ರಂದು ಫ್ರೀ ಬಿಡ್ ಸಭೆ ಸಹ ಮುಕ್ತಾಯಗೊಂಡಿದ್ದು, ಭಾಗವಹಿಸಿದ್ದ ಐದು ಜನ ಬಿಡ್‌ದಾರರಿಗೆ ಸೂಕ್ತ ಸ್ಪಷ್ಟೀಕರಣ ನೀಡಲಾಗಿದೆ. ಟೆಂಡರ್ ಸಲ್ಲಿಸಲು ಅ. 27 ಕೊನೆಯ ದಿನವಾಗಿತ್ತು. ಇದೀಗ ಟೆಕ್ನಿಕಲ್ ಬಿಡ್ ತೆರೆಯಲು ದಿನಾಂಕ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ವಿಮಾನ ನಿಲ್ದಾಣಕ್ಕೆ ಮೊದಲನೇ ಹಂತದ ಕಾಮಗಾರಿಗಳಾದ ಅವಶ್ಯಕತೆಗೆ ಅನುಗುಣವಾಗಿ ಗ್ರೌಂಡ್ ಲೇವಲಿಂಗ್, ರನ್ ವೇ, ಟ್ಯಾಕ್ಸಿ ವೇ, ಅಪ್ರಾನ್, ಐಸೋಲೇಶನ್ ವೇ, ಭೂಸ್ವಾಧೀನ ಪಡೆದ ಸ್ಥಳದಲ್ಲಿ ಅಪ್ರೋಚ್ ರೋಡ್ ಮತ್ತು ಆಂತರಿಕ ರಸ್ತೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಾಮಗಾರಿಗಳು ಒಳಗೊಂಡಿವೆ. ವಿಮಾನ ನಿಲ್ದಾಣದ ಒಟ್ಟು 125 ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗಾಗಿ ಡಿಪಿಆರ್ ತಯಾರಿ ಹಂತದಲ್ಲಿದ್ದು, ಸಂಪೂರ್ಣ ಸಿದ್ಧಗೊಂಡ ನಂತರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಬಿ.ಎಂ. ಪಾಟೀಲ, ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ತಹಸೀಲ್ದಾರ್ ಮೋಹನಕುಮಾರಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಜೂಮದಾರ್ ಸೇರಿ ವಿದ್ಯುತ್ ಮತ್ತು ನೀರು ಸರಬರಾಜು ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.