

ವಿಜಯಪುರ: ಬಸ್ ಸೌಲಭ್ಯ, ಶಿಷ್ಯ ವೇತನ ಹಾಗೂ ವಸತಿ ನಿಲಯದ ಪ್ರವೇಶಾತಿ ಅವಕಾಶ ಕಲ್ಪಿಸಲು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಶನ್ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ವಿವಿಧ ಭಾಗಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಮಾರ್ಗದ್ದಕ್ಕೂ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಘೋಷಣೆ ಕೂಡಲಾಯಿತು.
ನೇತೃತ್ವ ವಹಿಸಿದ್ದ ಎಐಡಿಎಸ್‌ಒ ರಾಜ್ಯ ನಾಯಕ ಅಭಯಾ ದಿವಾಕರ್ ಮಾತನಾಡಿ, ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದರೂ ಈವರೆಗೆ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಕಲ್ಪಿಸಿಲ್ಲ. ಹಳ್ಳಿಗಳಿಂದ ನಗರ ಪ್ರದೇಶಕ್ಕೆ ಬರಬೇಕಾದ ವಿದ್ಯಾರ್ಥಿಗಳು ಬಸ್ ಸೌಕರ್ಯ ಇಲ್ಲದ ಕಾರಣ ಕಾಲೇಜ್‌ಗೆ ಗೈರಾಗುವಂತಾಗಿದೆ. ಇದೇ ಸಂದರ್ಭದಲ್ಲಿ ಪರೀಕ್ಷೆ ಸಹ ಘೋಷಣೆಯಾಗಿದ್ದು ತೀರ ಸಂಕಷ್ಟಕ್ಕೆ ಸಿಲುಕಿಸಿದೆ. ವಿದ್ಯಾರ್ಥಿಗಳಿಗೆ ವಸತಿ ನಿಲಯದಲ್ಲಿ ಉಳಿದುಕೊಳ್ಳಲು ಸಹ ಆಗುತ್ತಿಲ್ಲ. ಕಾರಣ ವಸತಿ ನಿಲಯದಲ್ಲಿ ಪ್ರವೇಶಾತಿ ಸಿಕ್ಕಿಲ್ಲ. ಅರ್ಜಿ ಕೂಡ ಆಹ್ವಾನಿಸಿಲ್ಲ ಎಂದು ಆರೋಪಿಸಿದರು. ವಿದ್ಯಾರ್ಥಿಗಳಿಗೆ ಈವರೆಗೂ ಶಿಷ್ಯವೇತನ ಪಾವತಿಯಾಗಿಲ್ಲ. ಕೂಡಲೇ ಶಿಷ್ಯವೇತನ ಪಾವತಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಪದಾಧಿಕಾರಿಗಳಾದ ಕಾವ್ಯಾ ಬಿರಾದಾರ, ಜ್ಯೋತಿ ಅಂಬಿಗೇರ, ಶೀತಲ್ ಮಾದರ, ಪಲ್ಲವಿ ಉಮರ್ಜಿ, ಅಪ್ಸಾನಾ ಪಾಂಡುಗೋಳ, ಸುಮಯಾ ಪಾಂಡುಗೋಳ, ಯಲ್ಲಮ್ಮ ಜಾಲವಾದಿ, ಕಾವೇರಿ ರಜಪೂತ ಮತ್ತಿತರರಿದ್ದರು.