

ವಿಜಯಪುರ: ಕರೊನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆ ಜನ ಆತಂಕ ಪಡುವ ಅಗತ್ಯವಿಲ್ಲ. ಸೂಕ್ತ ಮುನ್ನೆಚ್ಚರಿಕೆ ವಹಿಸಿದರೆ ಯಾವುದೇ ಸೋಂಕು ತಗಲುವುದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಜಿಲ್ಲಾಡಳಿತ ಕಚೇರಿಯ ತಾಂತ್ರಿಕ ಸಭಾಂಗಣದಲ್ಲಿ ಸೋಮವಾರ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಈವರೆಗೆ ಜಿಲ್ಲಾಡಳಿತ ಕರೊನಾ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ. ಮುಂದಿನ ದಿನಗಳಲ್ಲಿಯೂ ಕರೊನಾ ಕಟ್ಟಿಹಾಕಲು ಮುಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಲು ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.
ಶಾಸಕ ಯಶವಂತರಾಯಗೌಡ ಪಾಟೀಲ, ಅರುಣ ಶಹಾಪುರ, ಸುನೀಲಗೌಡ ಪಾಟೀಲ, ಮಾಜಿ ಸಚಿವ ಎಂ.ಸಿ. ಮನಗೂಳಿ ಅವರು ಜಿಲ್ಲಾಡಳಿತ ಈವರೆಗೆ ಕೈಗೊಂಡ ಕ್ರಮಗಳು ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿವೆ. ನಿನ್ನೆಯ ಅನಿರೀಕ್ಷಿತ ಬೆಳವಣಿಗೆ ಮತ್ತು ದಿಢೀರ್ ಆಗಿ ನಗರದಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದರಿಂದ ಸಾರ್ವಜನಿಕರು ಮತ್ತು ಜಿಲ್ಲಾಡಳಿತದ ಅಧಿಕಾರಿ ಮತ್ತು ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದೆ. ಕಾರಣ ಸದ್ಯಕ್ಕೆ ಕರೊನಾ ಸಂಬಂಧಿತ ಹಾಗೂ ಆರೋಗ್ಯ ಸಂಬಂಧಿತ ವಿಷಯಗಳಿಗೆ ಹೆಚ್ಚು ಗಮನ ನೀಡುವ ಅನಿವಾರ್ಯತೆಯಿದೆ ಎಂದು ಹೇಳಿದರು.
ಜಿಲ್ಲಾದ್ಯಂತ ಕರೊನಾ ಸೋಂಕಿತರ ಬಗ್ಗೆ ತೀವ್ರ ನಿಗಾ ಇಡುವ ಅವಶ್ಯಕತೆಯಿದೆ. ಅದರಂತೆ ಅವರಿಗೆ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕಗಳ ಬಗ್ಗೆಯೂ ತೀವ್ರ ತನಿಖೆ ನಡೆಸಬೇಕಿದೆ. ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಯಾವುದೇ ಕಾರಣದಿಂದ ಸಾವನ್ನಪ್ಪಿದ ವ್ಯಕ್ತಿಗಳ ಬಗ್ಗೆಯೂ ಆಯಾ ತಾಲೂಕಾಡಳಿತ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಿಡಿಒಗಳ ಗಮನಕ್ಕೆ ತರಬೇಕು. ಜಿಲ್ಲಾದ್ಯಂತ ಸಾರ್ವಜನಿಕರಲ್ಲಿ ಹೆಚ್ಚು ಆತಂಕ ಮತ್ತು ಜಿಲ್ಲಾಡಳಿತದ ಮೇಲೆ ಹೆಚ್ಚಿನ ಒತ್ತಡ ಇರುವ ಹಿನ್ನೆಲೆಯಲ್ಲಿ ಕರೊನಾ ನಿಯಂತ್ರಣಕ್ಕೆ ಅವಶ್ಯಕ ಎಲ್ಲ ಸಹಕಾರವನ್ನು ಜನಪ್ರತಿನಿಧಿಗಳಿಂದ ದೊರೆಯಲಿ ಎಂದು ಸಚಿವೆ ಜೊಲ್ಲೆ ತಿಳಿಸಿದರು.
ಸರ್ಕಾರ ಜಿಲ್ಲೆಯ ಜನರೊಂದಿಗಿದ್ದು ಆತಂಕ ಪಡುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯ ಅಭಿವೃದ್ಧಿ, ಕರೊನಾ ನಿಯಂತ್ರಣ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ನಡೆಯಲು ನಿರಂತರ ಶ್ರಮಿಸೋಣ ಎಂದ ಜೊಲ್ಲೆ, ಜಿಲ್ಲೆಯ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಸೂಕ್ತ ಬೆಲೆ ದೊರೆತು ರೈತರಿಗೆ ನೆರವಾಗಲು ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳನ್ನು ಆರಂಭಿಸುವ ಕುರಿತು ಮತ್ತು ಜಿಲ್ಲೆಯಿಂದ ವಿಶೇಷವಾಗಿ ಸಿಂದಗಿ ಮತ್ತು ಇತರೆ ಕಡೆಗಳಿಂದ ಗುಳೆ ಹೋಗಿರುವಂತಹ ಕುಟುಂಬಗಳಿಗೆ ಆಹಾರ, ಇತರೆ ಅಗತ್ಯ ವಸ್ತುಗಳು ಇನ್ನಿತರ ಸಮಸ್ಯೆಗಳ ಪರಿಹಾರದ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುವುದರ ಜೊತೆಗೆ ಮಹಾರಾಷ್ಟ್ರ ಸರ್ಕಾರದೊಂದಿಗೂ ಚರ್ಚಿಸಿ ಸಾಧ್ಯವಿದ್ದಷ್ಟು ಅವರಿಗೆ ಸೌಲಭ್ಯ ಕಲ್ಪಿಸಲು ಹಾಗೂ ರಕ್ಷಣೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಮಾತನಾಡಿ, ಕರೊನಾ ನಿಯಂತ್ರಣಕ್ಕೆ ಖಾಸಗಿ ಆಸ್ಪತ್ರೆಗಳ ಸಹಕಾರ, ವೆಂಟಿಲೇಟರ್‌ಗಳ ವ್ಯವಸ್ಥೆ, ಸೋಂಕಿತರ ಪ್ರದೇಶದಲ್ಲಿ ಅಗತ್ಯ ವಸ್ತುಗಳ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು. ಜನರಿಗೆ, ಕಾರ್ಮಿಕರಿಗೆ, ನಿರ್ಗತಿಕರಿಗೆ ಊಟ, ದಿನಸಿ ವಸ್ತುಗಳ ವ್ಯವಸ್ಥೆ ಮಾಡಬೇಕು. ಜಿಲ್ಲಾಡಳಿತದೊಂದಿಗೆ ಬೆಂಬಲವಾಗಿ ನಿಲ್ಲುವುದಾಗಿ ತಿಳಿಸಿದರು.
ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಜಿಲ್ಲಾಡಳಿತ ಕರೋನಾ ನಿಯಂತ್ರಣಕ್ಕೆ ಶಕ್ತಿಮೀರಿ ಶ್ರಮಿಸಿದೆ. ಜೊತೆಗೆ ಕುಡಿಯುವ ನೀರಿಗೂ ಆದ್ಯತೆ ನೀಡಬೇಕು. ವಿವಿಧ ಕಾಲುವೆಗಳಿಗೆ ನೀರು ಹರಿಸಬೇಕು, ಭೀಮಾನದಿಗೆ ಉಜನಿ ಜಲಾಶಯದಿಂದ ನೀರು ಬಿಡುವ ಕುರಿತು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲು ಮನವಿ ಮಾಡಿದರು.
ಶಾಸಕ ಎಂ.ಸಿ. ಮನಗೂಳಿ ಮಾತನಾಡಿ, ಸಿಂದಗಿ ಭಾಗದಿಂದ ಮಹಾರಾಷ್ಟ್ರ ಮತ್ತು ಗೋವಾಗಳಿಗೆ ಹಲವು ಜನರು ಗುಳೆ ಹೋಗಿದ್ದು, ಅವರಿಗೆ ಊಟ, ವಸತಿ, ನೀರಿನ ಸೌಲಭ್ಯ ಒದಗಿಸುವಂತೆ ಮನವಿ ಮಾಡಿದರು.
ಶಾಸಕ ಎ.ಎಸ್ ಪಾಟೀಲ (ನಡಹಳ್ಳಿ) ಮಾತನಾಡಿ, ತಾಲೂಕಿನ 100 ವೈದ್ಯರು ಸ್ವಯಂ ಪ್ರೇರಣೆಯಿಂದ ಕೋವಿಡ್-19 ಚಿಕಿತ್ಸೆಗೆ ಮುಂದೆ ಬಂದಿದ್ದು, ಅವರಿಗೆ ಸುರಕ್ಷತಾ ಸಲಕರಣೆ ಪೂರೈಸಲು ಮನವಿ ಮಾಡಿದರು. ಶಾಸಕ ದೇವಾನಂದ ಚವಾಣ ಅವರು, ಮಹಾರಾಷ್ಟ್ರ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲು, ಶಾಸಕ ಅರುಣ ಶಹಾಪುರ ಅವರು, ಸೋಂಕಿತರ ಶವ ಸಂಸ್ಕಾರ ಮಾರ್ಗಸೂಚಿ ತಿಳಿಹೇಳಬೇಕು ಮತ್ತು ಕರೊನಾ ಲಕ್ಷಣಗಳ ಬಗ್ಗೆ ಮಾಹಿತಿ ನೀಡದೇ ಇರುವವರ ಬಗ್ಗೆ ತೀವ್ರ ನಿಗಾ ಇಡಬೇಕು, ಆರೋಗ್ಯ ಸಹಾಯಕರಿಗೆ ನೆರವಾಗುವಂತೆ ಸಲಹೆ ನೀಡಿದರು.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಈವರೆಗೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಜಿಪಂ ಸಿಇಒ ಗೋವಿಂದ ರೆಡ್ಡಿ ಮತ್ತಿತರರಿದ್ದರು.