

ವಿಜಯಪುರ: ರಾಜ್ಯದಲ್ಲಿ ದಲಿತ ದೌರ್ಜನ್ಯ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿದ್ದು ಸರ್ಕಾರ ಕೂಡಲೇ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸುವ ಮೂಲಕ ದಲಿತ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಲು ಒತ್ತಾಯಿಸಿ ಕರ್ನಾಟಕ ರಾಜ್ಯ ಚಲವಾದಿ ಹಾಗೂ ಮಾದಿಗ ಸಮನ್ವಯ ಸಮಿತಿಯಿಂದ ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಮಿತಿ ಅಧ್ಯಕ್ಷ ಆನಂದ ಅವದಿ ಮಾತನಾಡಿ, ದಲಿತರು ಅದರಲ್ಲೂ ಮಾದಿಗ ಹಾಗೂ ಚಲವಾದಿ ಸಮಾಜದ ಮೇಲೆ ನಿತ್ಯ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಈಚೆಗೆ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಮಾದಿಗ ಸಮಾಜದ ಯುವಕನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಅದೇ ರೀತಿ ಹಾಲ್ಯಾಳ ಗ್ರಾಮದಲ್ಲಿ ಮಾದಿಗ ಸಮಾಜದ ಯುವಕನೊಬ್ಬನನ್ನು ಮಾರಣಾಂತಿಕ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಲಾಗಿತ್ತು. ಇನ್ನು ಅನೇಕ ಕಡೆ ಇಂಥ ಘಟನೆಗಳು ಮರುಕಳಿಸುತ್ತಲೇ ಇವೆ. ಆದ್ದರಿಂದ ಸರ್ಕಾರ ಪ್ರಕರಣದ ತನಿಖೆಯನ್ನು ತ್ವರಿತವಾಗಿ ಕೈಗೊಂಡು ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಮಂಜುನಾಥ ವಾಲಿಕಾರ, ಸಂಗಮೇಶ ಅರಕೇರಿ, ಮಹೇಶ ಜೈನಾಪುರ, ವಿಜಯಕುಮಾರ ಅರಕೇರಿ, ಚಿದಾನಂದ ಜೈನಾಪುರ, ವಸಂತ ಬಡಿಗೇರ, ಸದಾನಂದ ಗುನ್ನಾಪುರ, ಕಂಠಿರವ ಹೊಸಮನಿ, ಸಂಗಪ್ಪ ಹರಿಜನ, ಸೋಮನಿಂಗ ದೊಡ್ಡಮನಿ, ಬಸವರಾಜ ಕಾಂಬಳೆ ಮತ್ತಿತರರಿದ್ದರು.