ಪ್ರಗತಿಪರ ಸಂಘಟನೆಗಳಿಂದ ಧರಣಿ ಸತ್ಯಾಗ್ರಹ

VJP 30-4
Published on

ವಿಜಯಪುರ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ಮತ್ತು ಕೃಷಿ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ವಿವಿಧ ರೈತ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಮಹಾತ್ಮ ಗಾಂಧಿ ಸ್ಮರಣೆ ದಿನ ಹಾಗೂ ರೈತರ ಹುತಾತ್ಮ ದಿನದ ಅಂಗವಾಗಿ ಶನಿವಾರ ಉಪವಾಸ ಸತ್ಯಾಗ್ರಹ ನಡೆಸಿದರು. ನಗರದ ಜಿಲ್ಲಾಡಳಿತ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದ ಪದಾಧಿಕಾರಿಗಳು, ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಕೃಷಿ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ಬ್ಯಾನರ್‌ಗಳನ್ನು ಪ್ರದರ್ಶಿಸಿದರು. ರೈತರ ನ್ಯಾಯಯುತ ಹೋರಾಟ ಯಶಸ್ವಿಯಾಗಲಿ. ದೆಹಲಿಯ ಕೆಂಪುಕೋಟೆ ಮೇಲೆ ಧ್ವಜ ಹಾರಿಸಿದ ಆರೋಪಿಗಳನ್ನು ಶಿಕ್ಷಿಸಿ, ಹೋರಾಟವನ್ನು ಹತ್ತಿಕ್ಕ್ಕುತ್ತಿರುವ ಪ್ರಜಾತಂತ್ರದ ವಿರೋಧಿಗಳಿಗೆ ಧಿಕ್ಕಾರ, ಕೃಷಿ ಕಾಯ್ದೆ ಹಿಂಪಡೆಯದ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಎಂಬ ಘೋಷಣೆಗಳು ಮೊಳಗಿದವು.

ರೈತರ ಹೋರಾಟಕ್ಕೆ ಧಕ್ಕೆ

ರೈತ ಮುಖಂಡ ಭೀಮಶಿ ಕಲಾದಗಿ ಮಾತನಾಡಿ, ಜ.26ರಂದು ಶಾಂತ ರೀತಿಯಿಂದ ನಡೆಯುತ್ತಿದ್ದ ಟ್ರಾೃಕ್ಟರ್ ಪರೇಡ್‌ನಲ್ಲಿ ಕೆಲ ಕಿಡಿಗೇಡಿಗಳು ದಾಂಧಲೆ ಎಬ್ಬಿಸಿದ್ದಾರೆ. ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದ್ದು ಖಂಡನೀಯ. ದುರುದ್ದೇಶದಿಂದ ರಾಷ್ಟ್ರದ್ರೋಹದ ಕೆಲಸ ಮಾಡಿ ರೈತರಿಗೆ ಕೆಟ್ಟ ಹೆಸರು ಮತ್ತು ಕಳಂಕ ತರಲು ಪ್ರಯತ್ನ ಮಾಡಿ ಸಿಕ್ಕು ಹಾಕಿಕೊಂಡಿದ್ದಾರೆ. ನಂತರ ಅವರು ಯಾರು, ಅವರ ಹಿನ್ನೆಲೆ ಏನು ಎಂಬುವುದು ಜಗತ್ತಿಗೆ ಗೊತ್ತಾಗಿದೆ. ಅಂಥವರ ಮೇಲೆ ಸರ್ಕಾರ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದರು.

ಕೃಷಿ ಕಾಯ್ದೆ ಹಿಂಪಡೆಯಲಿ

ಆರ್‌ಕೆಎಸ್ ರೈತ ಸಂಘಟನೆ ಮುಖಂಡ ಬಿ. ಭಗವಾನ್‌ರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರದ ನೂತನ ಕಾಯ್ದೆಗಳಿಂದಾಗಿ ಕಾರ್ಪೊರೇಟ್, ಬಹುರಾಷ್ಟ್ರೀಯ ಕಂಪನಿಗಳ ಮೋಸ, ಶೋಷಣೆಗೆ ರೈತರು ಬಲಿಯಾಗುತ್ತಾರೆ. ರೈತರು ಸಂಪೂರ್ಣವಾಗಿ ತಮ್ಮ ಸ್ವಾತಂತ್ರೃ ಕಳೆದುಕೊಂಡು ಕಂಪನಿಗಳ ಹಂಗಿನಲ್ಲಿ ನಡೆದಾಡುವ ಹೆಣಗಳಾಗಿ ಬಿಡುತ್ತಾರೆ. ಕರಾಳ ಕಾಯ್ದೆಯನ್ನು ಸರ್ಕಾರ ಹಿಂಪಡೆಯಬೇಕೆಂದು ಆಗ್ರಹಿಸಿದರು.

ಕೇಂದ್ರ ಸರ್ಕಾರದ ನಡೆಗೆ ಖಂಡನೆ

ರೈತ ಮುಖಂಡ ಪ್ರಕಾಶ್ ಹಿಟ್ನಳ್ಳಿ ಮಾತನಾಡಿ, ಸರ್ಕಾರ ಹತ್ತಾರು ಸುತ್ತು ರೈತ ನಾಯಕರೊಂದಿಗೆ ಮಾತುಕತೆ ನಡೆಸಿದೆ. ಆದರೆ ಈ ರೈತ ವಿರೋಧಿ ಕಾಯ್ದೆಗಳನ್ನು ಕೈಬಿಡಲು ತಯಾರಿಲ್ಲ. ಅಲ್ಲದೆ, ಈ ಹೋರಾಟವನ್ನು ಒಡೆಯಲು ಪ್ರಯತ್ನಿಸುತ್ತಿರುವ ಸರ್ಕಾರದ ನಡೆಯನ್ನು ಖಂಡಿಸಿದರು. ಆರ್‌ಕೆಎಸ್ ಜಿಲ್ಲಾ ಸಂಚಾಲಕ ಬಾಳು ಜೇವೂರ, ಚಂದ್ರಗೌಡ ಪಾಟೀಲ ಮಾತನಾಡಿದರು. ಮುಖಂಡರಾದ ಅಣ್ಣಾರಾಯ ಈಳಗೇರ, ಶಕ್ತಿಕುಮಾರ, ಸುಜಾತಾ ಶಿಂಧೆ, ಸಿದ್ದಲಿಂಗ ಬಾಗೇವಾಡಿ, ಇರ್ಫಾನ್ ಶೇಖ, ಸದಾನಂದ ಮೋದಿ, ಲಕ್ಷ್ಮಣ ಹಂದ್ರಾಳ, ಸುರೇಖಾ ರಜಪೂತ, ಸಿ.ಬಿ. ಪಾಟೀಲ, ಭರತಕುಮಾರ, ದಸ್ತಗೀರ ಸಾಲೋಟಗಿ, ಶಂಕರಗೌಡ ಲಿಗಾಡೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net