ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ

VJP 8-1
Published on

ವಿಜಯಪುರ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಗುವವರೆಗೆ ಉಗ್ರ ಹೋರಾಟ ನಿಲ್ಲದು ಎಂದು ಡಾ. ಬಿ.ಎಸ್. ಪಾಟೀಲ (ನಾಗರಾಳ ಹುಲಿ) ನುಡಿದರು.

ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಜಿಲ್ಲಾಡಳಿತ ಕಚೇರಿವರೆಗೆ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ರೈತಾಪಿ ವರ್ಗದ ಬಡ ಜನರ ಪಂಚಮಸಾಲಿ ಸಮಾಜದ ಮುಂಬರುವ ಜನಾಂಗದ ಹಿತದೃಷ್ಟಿಯಿಂದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸರ್ಕಾರಿ ಸೌಲತ್ತುಗಳನ್ನು ಪಡೆಯಲು ಹೋರಾಟ ನಡೆಯುತ್ತಿದೆ. ರಾಜ್ಯಾದ್ಯಂತ ಪ್ರತಿಭಟನೆ ಕಾವು ಹೆಚ್ಚಿದೆ. ಕೂಡಲೇ ಸರ್ಕಾರ ಸಮಾಜದ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ಹೋರಾಟ ಮತ್ತಷ್ಟು ಚುರುಕು ಪಡೆಯಲಿದೆ ಎಂದರು.

ಮುಖಂಡ ಬಿ.ಎಂ. ಪಾಟೀಲ (ದೇವರಹಿಪ್ಪರಗಿ) ಮಾತನಾಡಿ, ಕಳೆದ 25 ವರ್ಷಗಳಿಂದ ಪಂಚಮಸಾಲಿ ಸಮಾಜ ಬಾಂಧವರು 2ಎ ಮೀಸಲಾತಿಗಾಗಿ ಹೋರಾಡುತ್ತಿದ್ದು ಈಗ ಕೂಡಲ ಸಂಗಮ ಪೀಠದ ಬಸವಜಯಮೃತ್ಯುಂಜಯ ಮಹಾಸ್ವಾಮೀಜಿ ಹಾಗೂ ಹರಿಹರ ಪೀಠದ ವಚನಾನಂದ ಶ್ರೀಗಳ ನೇತೃತ್ವದಲ್ಲಿ ಪಂಚಲಕ್ಷ ಪಾದಯಾತ್ರೆಯ ಹೋರಾಟ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ವ್ಯತಿರಿಕ್ತ ಹೇಳಿಕೆ ನೀಡಿ ಸಮಾಜ ಬಾಂಧವರ ಭಾವನೆಗಳಿಗೆ ಧಕ್ಕೆ ತರದೆ ಕೂಡಲೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಿದರು.

ಹಿಕ್ಕನಗುತ್ತಿಯ ಪೂಜ್ಯ ಪ್ರಭುಲಿಂಗ ಶರಣರು ಮಾತನಾಡಿ, ಸಮಾಜದ ಅನೇಕ ಪ್ರತಿಭೆಗಳು ಶಿಕ್ಷಣ ಹಾಗೂ ಸರ್ಕಾರಿ ಸೌಲಭ್ಯಗಳಿಂದ ವಂಚಿತಗೊಳ್ಳುತ್ತಿದ್ದಾರೆ. ಅರ್ಹತೆ, ಯೋಗ್ಯತೆ, ಪ್ರತಿಭೆ ಇದ್ದರೂ ಅವಕಾಶ ವಂಚಿತರಾಗಿ ನೋವು ಅನುಭವಿಸುತ್ತಿದ್ದಾರೆ. ರೈತಾಪಿ ವರ್ಗದವರು, ಬಡವರು, ಕೂಲಿಕಾರರು, ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರ ನೋವನ್ನು ಆಡಳಿತ ಯಂತ್ರ ಅರ್ಥಮಾಡಿಕೊಂಡು ಕೂಡಲೇ ಮೀಸಲಾತಿ ಕಲ್ಪಿಸಬೇಕೆಂದರು. ಮುಖಂಡರಾದ ಸಿ.ಎಸ್. ಸೋಲಾಪುರ, ಶಂಕರಗೌಡ ಬಿರಾದಾರ, ಶ್ರೀಶೈಲ ಆರ್. ಬುಕ್ಕಣ್ಣಿ, ನಿಂಗನಗೌಡ ಸೋಲಾಪುರ, ದಾನೇಶ ಅವಟಿ, ಸೋಮಶೇಖರ ದೇವರ, ಲತಾ ಬಿರಾದಾರ, ವಿದ್ಯಾರಾಣಿ ತುಂಗಳ, ರೇಣುಕಾರ ಹಗರಟಗಿ, ಉಮಾ ಪಾಟೀಲ, ಬಸಮ್ಮ ಗುಜರಿ, ಜ್ಯೋತಿ ಪಾಗಾದ, ಉತ್ತಮ್ಮ ಪಾಗಾದ, ನಿಂಗಪ್ಪ ಸಂಗಾಪುರ, ವಿಜಯಕುಮಾರ ಜಾಧವ, ಮಂಜು ಲೋಣಿ, ಶರಣಬಸು ಕೋನಳ್ಳಿ, ಪುಂಡಲೀಕ ಕಾಖಂಡಕಿ, ಚಿದಾನಂದ ಯಳಮೇಲಿ, ಸಿದ್ದು ಹಳ್ಳುರ, ಅಶೋಕ ಬಿರಾದಾರ (ತಿಡಗುಂದಿ) ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net