

ವಿಜಯಪುರ: ಕೃಷಿ ನೀತಿಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಪದಾಧಿಕಾರಿಗಳು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ಸುರೇಖಾ ರಜಪೂತ ಮಾತನಾಡಿ, ಕೃಷಿಯಲ್ಲಿ ದುಡಿಯುವ ಮಹಿಳೆಯರನ್ನು ರೈತರೆಂದು ಗುರುತಿಸಬೇಕು. ಜನ ವಿರೋಧಿ ಕೃಷಿ ಕಾಯ್ದೆ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ, ಕಾರ್ಮಿಕ ಸಂಹಿತೆಗಳನ್ನು ಹಿಂತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರ ತಂದಿರುವ ಭೂಸುಧಾರಣೆ ತಿದ್ದುಪಡಿ ಕಾಯ್ದೆ, ಗೋಹತ್ಯಾ ನಿಷೇೀಧ ಕಾಯ್ದೆಯನ್ನು ಹಿಂತೆಗೆದುಕೊಳ್ಳಬೇಕು. ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳು ಹಾಗೂ ಮೈಕ್ರೋಫೈನಾನ್ಸ್‌ನಿಂದ ಮಹಿಳೆಯರು ಪಡೆದಿರುವ ಸಾಲವನ್ನು ಬಡ್ಡಿ ಸಹಿತ ಮನ್ನಾ ಮಾಡಿ ಸಾಲ ಮರುಪಾವತಿಗೆ ಕಿರುಕುಳ ನೀಡುವ ಏಜೆನ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, 150 ಜನ ರೈತರು ಈಗಾಗಲೇ ಮೃತರಾಗಿದ್ದು, ಕೃಷಿ ಕಾಯ್ದೆ ನೀತಿಗಳನ್ನು ವಾಪಸ್ ಪಡೆಯಬೇಕು. ಕೂಡಲೇ ಮೃತ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಅರವಿಂದ ಕುಲಕರ್ಣಿ, ಸೋನುಬಾಯಿ ಬ್ಯಾಳಿ, ಸಾಯಿಬಿ ಶೇಖ, ಅನುಸೂಯಾ ಹಜೇರಿ, ಸುಮಿತ್ರಾ ಘೋಣಸಗಿ, ಜೈನುಬಿ ಬದಾಮಿ, ಕುಸುಮಾ ಹಜೇರಿ, ಮಾದೇವಿ ಕೂಡಲಗಿ, ಗೀತಾ ಚಲವಾದಿ, ಶಾರದಾ ಲಮಾಣಿ ಮತ್ತಿತರರಿದ್ದರು.