

ವಿಜಯಪುರ: ಮುಳವಾಡ ಏತ ನೀರಾವರಿ ಯೋಜನೆಯಡಿ ಕಾಲುವೆಗೆ ನೀರು ಹರಿಸಲು ಅನುವು ಮಾಡಿಕೊಡದಿದ್ದರೆ ರೈಲು ರೋಖೋ ಚಳವಳಿ ಹಮ್ಮಿಕೊಳ್ಳುವುದಾಗಿ ಅಖಂಡ ಕರ್ನಾಟಕ ರೈತ ಸಂಘ ಎಚ್ಚರಿಸಿದೆ.
ನಗರದ ಗಗನ ಮಹಲ್ ಉದ್ಯಾನದಲ್ಲಿ ಗುರುವಾರ ಸಭೆ ನಡೆಸಿದ ಸಂಘದ ಕಾರ್ಯಕರ್ತರು ಬಳಿಕ ರೈಲ್ವೆ ಇಲಾಖೆ ವ್ಯವಸ್ಥಾಪಕ ಗೌಸ್ ಮೋದಿನ್ ಬೇವನೂರ ಅವರಿಗೆ ಮನವಿ ಸಲ್ಲಿಸಿದರು.
ಮುಳವಾಡ ಏತ ನೀರಾವರಿ ಯೋಜನೆಯಡಿ ಕೂಡಗಿ ಬಳಿ ಕಾಲುವೆಗೆ ಅಡ್ಡಲಾಗಿ ನಿರ್ಮಿಸಿರುವ ರೈಲ್ವೆ ಸೇತುವೆ ಕೆಳಗಡೆ ಬಾಕ್ಸ್ ಪುಸ್ಸಿಂಗ್ ಕಾರ್ಯ ಕೈಗೊಳ್ಳಬೇಕಿದೆ. ಸದರಿ ಕಾರ್ಯದ ವಿಳಂಬದಿಂದಾಗಿ ಕಾಲುವೆಗೆ ನೀರು ಹರಿಸಲು ಆಗುತ್ತಿಲ್ಲ. ಪುಸ್ಸಿಂಗ್ ಬಾಕ್ಸ್ ಕಾಮಗಾರಿ ನೆಪದಲ್ಲಿ ಕಾಲುವೆಗಳಿಗೆ ನೀರು ಹರಿಸುವುದನ್ನು ಪದೇ ಪದೇ ರೈಲ್ವೆ ಇಲಾಖೆ ತಡೆ ಹಿಡಿಯುತ್ತಿದೆ. ನಮಗೆ ರೈಲ್ವೆಗಿಂತ ನೀರು ಮುಖ್ಯವಾಗಿದೆ. ಹೀಗಾಗಿ ರೈಲ್ವೆ ಸಂಚಾರ ಸ್ಥಗಿತಗೊಳಿಸಿ ಮೊದಲು ಪುಸ್ಸಿಂಗ್ ಕಾರ್ಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರೈತ ಮುಖಂಡರಾದ ಅರವಿಂದ ಕುಲಕರ್ಣಿ, ಬಿ.ಎಲ್. ಪಾಟೀಲ, ಪಾಂಡು ಹ್ಯಾಟಿ, ಸದಾಶಿವ ಬರಟಗಿ, ಸಿದ್ರಾಮ ಅಂಗಡಗೇರಿ, ಕೃಷ್ಣಾ ಭೋಸಲೆ, ಸೋಮನಗೌಡ ಪಾಟೀಲ, ಹೊನಕೇರೆಪ್ಪ ತೆಲಗಿ, ಚಂದ್ರಾಮ ತೆಗ್ಗಿ, ಈರಪ್ಪ ತೇಲಿ, ರೇವಣಪ್ಪ ಕಡಗೋಲ, ಬಸವರಾಜ ಜಂಗಮಶೆಟ್ಟಿ, ಗುರು ಕೋಟ್ಯಾಳ, ಬಸವರಾಜ ಗಳವೆ, ಪ್ರೇಮದಾಸ ರಾಠೋಡ, ಶಿವಕಾಂತ ಕೋತ, ಅಕ್ಷಯ ಕೋತ, ಸಚಿವ ಭೋಸಲೆ, ರಾಜು ಬಿಸೆ, ಚನ್ನಬಸಪ್ಪ ಸಿಂಧೂರ, ಗುರಲಿಂಗಪ್ಪ ಪಡಸಲಗಿ, ಕೃಷ್ಣಪ್ಪ ಬಮ್ಮರಡ್ಡಿ, ಚಂದ್ರಾಮ ಹಿಪ್ಪಲಿ ಮತ್ತಿತರರಿದ್ದರು.