

ವಿಜಯಪುರ: ದಶಕಗಳಿಂದ ದಲ್ಲಾಳಿಗಳ ಹಾವಳಿಯಂದಾಗಿ ಹತಾಸೆಗೊಳಗಾದ ರೈತ ಸಮುದಾಯಕ್ಕೆ ಕೇಂದ್ರ ಸರ್ಕಾರವು ಇತ್ತೀಚೆಗೆ ಜಾರಿಗೊಳಿಸಿದರುವ ಕೃಷಿ ಕಾಯ್ದೆಗಳು ಹೊಸ ಭರವಸೆ ಮೂಡಿಸಿದಂತಾಗಿದ್ದು, ಕೃಷಿ ಉತ್ಪನ್ನಗಳಿಗೆ ನ್ಯಾಯಯುತವಾದ ಬೆಲೆ ದೊರಕಲು ಸಹಕಾರಿಯಾಗಿವೆ. ಆದ್ದರಿಂದ ರೈತರು ಹೊಸ ಬದಲಾವಣೆಗೆ ಹೊಂದಿಕೊಳ್ಳುವ ಅನಿವಾರ್ಯತೆ ಇದೆ ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಿ.ಎಲ್. ಪಾಟೀಲ ಹೇಳಿದರು.
ನಗರದ ಕೃಷಿ ಇಲಾಖೆ ಉಪ ನಿರ್ದೇಶಕರ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕೈವಾಡದಿಂದಾಗಿ, ಕೆಲವು ರೈತ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ರೈತರನ್ನು ತಪ್ಪ್ಪು ದಾರಿಗೆಳೆಯಲು ಪ್ರಯತ್ನಿಸುತ್ತಿವೆ. ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೆ ಕಾಯ್ದೆಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತು ನೀಡಬೇಕು. ಕೃಷಿ ಕಾಯ್ದೆಗಳನ್ನು ಒಗ್ಗಟ್ಟಾಗಿ ಬೆಂಬಲಿಸುವ ಅವಶ್ಯಕತೆ ಇದೆ. ರೈತರು ಹೊಸ ಬದಲಾವಣೆಗಳಿಗೆ ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.
ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ. ರಾಜಶೇಖರ ವಿಲಿಯಮ್ಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ಕೃಷಿ ಕಾಯ್ದೆಗಳಿಂದ ರೈತರಿಗೆ ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ಮುಕ್ತ ಅವಕಾಶವನ್ನು ಕಲ್ಪಿಸಿದ್ದು, ಇದರಿಂದಾಗಿ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ದೊರಕುವ ಭರವಸೆ ಮೂಡಿದೆ. ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಖಾಸಗಿ ಬಂಡವಾಳ ತೊಡಗುವಿಕೆಗೆ ಹಾಗೂ ಹೊಸ ತಂತ್ರಜ್ಞಾನಗಳ ಬಳಕೆಗೆ ಪ್ರೋತ್ಸಾಹದಾಯಕವಾಗಿದ್ದು, ಕೃಷಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿವೆ ಎಂದು ತಿಳಿಸಿದರು.
ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಸಂಜಯ ಪಾಟೀಲ ಕನಮಡಿ, ಕೃಷಿ ಇಲಾಖೆ ಉಪ ನಿರ್ದೇಶಕ-1 ಪ್ರಕಾಶ ಚವಾಣ್, ಆತ್ಮ ಯೋಜನೆಯ ಉಪ ಯೋಜನಾ ನಿರ್ದೇಶಕ ಡಾ.ಎಂ.ಬಿ. ಪಟ್ಟಣಶೆಟ್ಟಿ, ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ. ದೊಡಮನಿ, ಕೃಷಿ ಅಧಿಕಾರಿ ಪೃಥ್ವಿ ಬಂಕಾಪುರ, ಸೀತಾ ದೊಡಮನಿ, ಮಧು ಪಾಟೀಲ, ರಾಜಶೇಖರ ನಿಂಬರಗಿ, ಮಲ್ಲಪ್ಪ ಕುಂಬಳ, ರಾಜೇಂದ್ರ ಪಾಟೀಲ, ಬಸಗೊಂಡ ಶಿರಮಗೊಂಡ, ಅರವಿಂದ ಪಾಟೀಲ, ರಾಜಶ್ರೀ ಕೋರೆಗೋಳ ಮತ್ತಿತರರಿದ್ದರು.