ಪಾರ್ಲಿಮೆಂಟ್‌ನಿಂದ ಪಂಚಾಯಿತಿವರೆಗೆ ಬಿಜೆಪಿ

VJP_Pressmeet
Published on

ವಿಜಯಪುರ: ಪಾರ್ಲಿಮೆಂಟ್‌ನಿಂದ ಪಂಚಾಯಿತಿವರೆಗೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಪ್ರಧಾನಿ ಮೋದಿ ಗುರಿಯಾಗಿದ್ದು, ಸರ್ಕಾರದ ಸಾಧನೆಗಳನ್ನು ಮನವರಿಕೆ ಮಾಡುವ ನಿಟ್ಟಿನಲ್ಲಿ ಗ್ರಾಮ ಸ್ವರಾಜ್ ಸಮಾವೇಶ ಆಯೋಜಿಸಿದ್ದಾಗಿ ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು. ಬಿಜೆಪಿ ಅಲೆ ವ್ಯಾಪಿಸಿದೆ. ಉಪ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿಗೆ ನೆಲೆಯಿಲ್ಲ ಎಂಬ ಮಾತು ಇತ್ತು. ಇದೀಗ ಅಲ್ಲೂ ಗೆಲುವು ಸಾಧಿಸಿದೆ. ತೆಲಂಗಾಣದಲ್ಲೂ ಬಿಜೆಪಿ ರಣಕಹಳೆ ಮೊಳಗಿಸಿದೆ ಎಂದರು.

ಮೋದಿ ಸರ್ಕಾರದ ಸಾಧನೆ

ದೇಶದಲ್ಲಿ 60 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಸಾಧನೆಗಿಂತ ಮೋದಿ ಸಾಧನೆ ನೂರು ಪಟ್ಟು ಅಧಿಕವಾಗಿದೆ. ಸ್ವಾತಂತ್ರ್ಯ ನಂತರ 18453 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಮೋದಿ ಅವರು ಆ ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಿದ್ದಾರೆ. ಕರೊನಾ ಸಂಕಷ್ಟದಲ್ಲಿ 80 ಕೋಟಿ ಜನರಿಗೆ ಐದು ಕೆಜಿ ಅಕ್ಕಿ ಮತ್ತು ಬೇಳೆ ಉಚಿತವಾಗಿ ನೀಡಲಾಗಿದೆ. ಕಡುಬಡವರಿಗೆ 5000ರೂ. ಸಹಾಯ ಧನ ನೀಡಲಾಗಿದೆ. ನೆರೆ ಹಾಗೂ ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಮತ್ತು ಬೆಳೆ ಹಾನಿಗೀಡಾದ ರೈತರಿಗೆ ಪರಿಹಾರ ಕಲ್ಪಿಸಲಾಗಿದೆ. ಪ್ರಾಕೃತಿಕ ವಿಕೋಪಗಳಿಗಾಗಿ ಸರ್ಕಾರ 2300 ಕೋಟಿ ರೂ. ಪ್ಯಾಕೇಜ್ ನೀಡಿದೆ ಎಂದರು.

ಸರ್ಕಾರದ ಯೋಜನೆಗಳು

ಉಜ್ವಲ ಯೋಜನೆಯಡಿ 12 ಕೋಟಿ ಕುಟುಂಬಗಳಿಗೆ ಉಚಿತವಾಗಿ ಎಲ್‌ಪಿಜಿ ಸೌಲಭ್ಯ ಕಲ್ಪಿಸಲಾಗಿದೆ. ಪ್ರಧಾನ ಮಂತ್ರಿ ಜನಧನ್ ಯೋಜನೆಯಡಿ 38.33 ಕೋಟಿ ರೂ. ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ. 10 ಸಾವಿರ ರೈತ ಉತ್ಪನ್ನ ಸಂಸ್ಥೆಗಳಿಗೆ ಬಜೆಟ್‌ನಲ್ಲಿ ಲಕ್ಷ ಕೋಟಿ ರೂ. ಅನುದಾನ ನೀಡಲಾಗಿದೆ. ರಾಷ್ಟ್ರದಲ್ಲಿ ಗುಳೆ ತಪ್ಪಿಸಲು ಒಂದು ದೇಶ ಒಂದು ಪಡಿತರ ಯೋಜನೆ ಜಾರಿಗೆ ತರಲಾಗಿದೆ. ಅಟಲ್ ಪಿಂಚಣಿ ಯೋಜನೆಯಡಿ 2.33 ಕೋಟಿ ಜನರಿಗೆ ಪಿಂಚಣಿ ಸೌಲಭ್ಯ ಕಲ್ಪಿಸಿದೆ. 2 ಕೋಟಿ ಮನೆ, 10 ಕೋಟಿಗೂ ಅಧಿಕ ಶೌಚಗೃಹ ನಿರ್ಮಿಸಲಾಗಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ 22.53 ಕೋಟಿ ಜನರಿಗೆ ಸಾಲಸೌಲಭ್ಯ ಕಲ್ಪಿಸಿದೆ. ರೈತರ ಖಾತೆಗೆ ರಾಜ್ಯ ಸರ್ಕಾರದ ಅನುದಾನ ಸೇರಿಸಿ 10 ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ. ಸಿರಿಧಾನ್ಯ ಬೆಳೆಯಲು 200 ಕೋಟಿ ರೂ. ಪ್ರೋತ್ಸಾಹ ಧನ ನೀಡಲಾಗಿದೆ. ಜನೌಷಧ ಮಳಿಗೆ, ಆಹಾರ ಭದ್ರತಾ ಯೋಜನೆ ಹೀಗೆ ಅನೇಕ ಯೋಜನೆ ಜಾರಿಗೊಳಿಸಿದ್ದಾಗಿ ಕಾರಜೋಳ ವಿವರಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ ಮಾತನಾಡಿ, ಪ್ರಸ್ತುತ ಗ್ರಾಪಂ ಚುನಾವಣೆ ಹಾಗೂ ಮುಂದಿನ ತಾಪಂ ಮತ್ತು ಜಿಪಂ ಚುನಾವಣೆ ಹಿನ್ನೆಲೆ ಗ್ರಾಮ ಸ್ವರಾಜ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ ಒಟ್ಟು ಆರು ತಂಡ ರಚಿಸಲಾಗಿದೆ. ನಳೀನ್ ಕುಮಾರ್ ಕಟೀಲ್, ಡಿಸಿಎಂ ಗೋವಿಂದ ಕಾರಜೋಳ ಸೇರಿ ಹಲವರಿಗೆ ಜವಾಬ್ದಾರಿ ನೀಡಲಾಗಿದೆ. ಪ್ರತಿಯೊಬ್ಬರಿಗೂ ಐದಾರು ಜಿಲ್ಲೆ ಉಸ್ತುವಾರಿ ನೀಡಿದ್ದು, ಪ್ರತಿ ಜಿಲ್ಲೆಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಹೆಚ್ಚಿನ ಶಾಸಕರು ಹಾಗೂ ಸಂಸದರನ್ನು ಹೊಂದಿರುವ ಬಿಜೆಪಿಯಿಂದ ಗ್ರಾಮ ಮಟ್ಟದಲ್ಲೂ ನಾಯಕತ್ವ ಬೆಳೆಸಲು ಯೋಜನೆ ರೂಪಿಸಲಾಗಿದೆ. ಪ್ರಧಾನಿ ಮೋದಿ ಅವರು 14 ಮತ್ತು 15ನೇ ಹಣಕಾಸು ಯೋಜನೆಯಡಿ ಕೊಟ್ಟ ಅನುದಾನ, ಕುಡಿಯುವ ನೀರಿನ ಯೋಜನೆ, ಶೌಚಗೃಹ ನಿರ್ಮಾಣ, ಎರಡೂವರೆ ಸಾವಿರ ಪಿಡಿಒಗಳ ನೇಮಕ ಮಾಡಿದ ಬಗ್ಗೆ ಜನರಿಗೆ ಮನದಟ್ಟು ಮಾಡಲು ತಂಡ ರೂಪಿಸಿದ್ದಾಗಿ ತಿಳಿಸಿದರು.

ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ಪಿ. ರಾಜೀವ, ಕರ್ನಾಟಕ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಎಂ.ಬಿ. ನಂದೀಶ, ಆರ್.ಎಸ್. ಪಾಟೀಲ ಕೂಚಬಾಳ, ಚಂದ್ರಶೇಖರ ಕವಟಗಿ, ಗೂಳಪ್ಪ ಶಟಗಾರ, ಮಲ್ಲಮ್ಮ ಜೋಗೂರ, ದಯಾಸಾಗರ ಪಾಟೀಲ, ರವೀಂದ್ರ ಲೋಣಿ ಮತ್ತಿತರರಿದ್ದರು.

ಡಿಸೆಂಬರ್‌ನಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಆರಂಭವಾಗಲಿದೆ. ಲೋಕೋಪಯೋಗಿ ಇಲಾಖೆ ಅನುದಾನದಡಿ ಕಾಮಗಾರಿ ಕೈಗೊಳ್ಳಲಾಗುತ್ತದೆ. ಟೆಂಡರ್ ಪ್ರಕ್ರಿಯೆ ನಡೆದಿದೆ. ಹೀಗಾಗಿ ನಕಾರಾತ್ಮಕವಾಗಿ ಯೋಚಿಸೋದು ಬೇಡ.ಗೋವಿಂದ ಕಾರಜೋಳ, ಡಿಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net