

ವಿಜಯಪುರ: ರಾಷ್ಟ್ರಪಿತ ಮಹಾತ್ಮ ಗಾಂಧಿ ಪುಣ್ಯತಿಥಿ ಅಂಗವಾಗಿ ಜಿಲ್ಲಾಡಳಿತ ವತಿಯಿಂದ ಶನಿವಾರ ಹುತಾತ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಭಾರತ ಸೇವಾ ದಳ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ನೆಹರು ಯುವ ಕೇಂದ್ರದ ವತಿಯಿಂದ ನಗರದ ಹುತಾತ್ಮ ವೃತ್ತದಲ್ಲಿ ಹುತಾತ್ಮರ ದಿನಾಚರಣೆ, ಸರ್ವಧರ್ಮ ಪ್ರಾರ್ಥನೆ ಹಮ್ಮಿಕೊಳ್ಳಲಾಯಿತು.
ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಹಿರಿಯ ಅಧಿಕಾರಿಗಳು ಮತ್ತು ಗಣ್ಯರು ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಮೀನಾಕ್ಷಿ ಚೌಕ್‌ದಲ್ಲಿನ ಹುತಾತ್ಮರ ಸ್ಮಾರಕಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಭಾರತ ಸೇವಾ ದಳ ಜಿಲ್ಲಾ ಸಮಿತಿ ಸದಸ್ಯ ನಾಗೇಶ ಡೋಣೂರ, ಎಸ್.ಎಲ್. ರಾಠೋಡ ಸಂಗಡಿಗರು ಸರ್ವಧರ್ಮ ಪ್ರಾರ್ಥನೆ ಸಲ್ಲಿಸಿದರು. ರಘುಪತಿ ರಾಘವ ರಾಜಾರಾಮ, ಪತಿತ ಪಾವನ ಸೀತಾರಾಮ, ವೈಷ್ಣವ ಜನತೋ ಹಾಗೂ ಓಂ ಅಸತೋಮಾ ಸದ್ಗಮಯ ತಮಸೋಮ ಜ್ಯೋತಿರ್ಗಮಯ ಪ್ರಾರ್ಥನೆಗಳ ಮೂಲಕ ಹುತಾತ್ಮರ ಸ್ಮರಣೆಯನ್ನು ಮಾಡಲಾಯಿತು.
ಬಾಲಕರ ಸರ್ಕಾರಿ ಪಪೂ ಕಾಲೇಜಿನ ವಿದ್ಯಾರ್ಥಿ ಕುಮಾರ ಕಾಳೆ ಮಾತನಾಡಿ, ಮಹಾತ್ಮ ಗಾಂಧಿ ಪುಣ್ಯತಿಥಿ ಅಂಗವಾಗಿ ಹುತಾತ್ಮ ದಿನ ಆಚರಿಸಲಾಗುತ್ತಿದೆ. ಗಾಂಧೀಜಿಯವರು ಅಹಿಂಸೆ ಮತ್ತು ಶಾಂತಿ ಮಂತ್ರದ ಮೂಲಕ ಹೋರಾಟ ನಡೆಸಿ ಭಾರತವನ್ನು ಬ್ರಿಟಿಷರಿಂದ ಮುಕ್ತಗೊಳಿಸಿದರು. ಗಾಂಧೀಜಿ ಸೇರಿ ಭಾರತದ ವೀರ ಭಗತ್‌ಸಿಂಗ್, ಕಿತ್ತೂರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಮತ್ತಿತರರು ಜೀವ ತ್ಯಾಗ ಮಾಡಿ ಸ್ವಾತಂತ್ರೃ ದೊರಕಿಸಿಕೊಟ್ಟಿದ್ದು, ಅವರೆಲ್ಲರನ್ನು ಸ್ಮರಿಸುವುದಾಗಿ ತಿಳಿಸಿದರು.
ವಿದ್ಯಾರ್ಥಿನಿ ಗೌರಮ್ಮ ಹಿರೇಮಠ ಮಾತನಾಡಿ, ದೇಶಕ್ಕಾಗಿ ತ್ಯಾಗ ಮಾಡಿದ ವೀರಭಗತ್‌ಸಿಂಗ್ ಅವರ ಅಭಿಪ್ರಾಯದಂತೆ ಯುವಕರು ದೇಶದ ಚುಕ್ಕಾಣಿ ಹಿಡಿಯುವ ಜತೆಗೆ ಆರ್ಥಿಕ ಪರಿಸ್ಥಿತಿ ಮತ್ತು ಇತರ ಸಮಸ್ಯೆಗಳ ನಿವಾರಣೆ ಮತ್ತು ಪರಿಹಾರದ ಜ್ಞಾನ ಹೊಂದಬೇಕು ಎಂದರು.
ಮಹಾತ್ಮ ಗಾಂಧೀಜಿ ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ ಸೇರಿದಂತೆ ಅನೇಕ ಚಳವಳಿಗಳ ಮೂಲಕ ದೇಶದ ಸ್ವಾತಂತ್ರೃಕ್ಕಾಗಿ ಹೋರಾಟ ನಡೆಸಿದರು. ಪ್ರಾಣವನ್ನು ಪಣಕ್ಕಿಟ್ಟು ಭಾರತಕ್ಕೆ ಸಂಪೂರ್ಣ ಸ್ವಾತಂತ್ರೃ ಗಳಿಸಿಕೊಟ್ಟರು. ಇಂತಹ ಮಹಾನ್ ಹುತಾತ್ಮರನ್ನು ಇಂದಿನ ದಿನದಂದು ನಾವೆಲ್ಲರು ಸ್ಮರಿಸಬೇಕು ಎಂದರು. ನಂತರ ಪಾದಯಾತ್ರೆ ಮೂಲಕ ತೆರಳಿ ಜಿಲ್ಲಾಧಿಕಾರಿಗಳು ಹಾಗೂ ಗಣ್ಯರು ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಗಾಂಧೀಜಿ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಅರ್ಪಿಸಿದರು. ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ಉಪವಿಭಾಗಾಧಿಕಾರಿ ರಾಮಚಂದ್ರ ಗಢಾದೆ, ತಹಸೀಲ್ದಾರ್ ಮೋಹನಕುಮಾರಿ, ನೆಹರು ಯುವ ಕೇಂದ್ರದ ಯುವ ಸಮನ್ವಯಾಧಿಕಾರಿ ರಾಹುಲ ಡೆಂಗ್ರೆ, ಡಿಎಸ್‌ಪಿ ಲಕ್ಷ್ಮಿ ನಾರಾಯಣ, ಭಾರತ ಸೇವಾ ದಳದ ಜಿಲ್ಲಾ ಮುಖ್ಯಸ್ಥ ಎಸ್.ಪಿ. ಬಿರಾದಾರ, ವಿದ್ಯಾವತಿ ಅಂಕಲಗಿ, ಅಬ್ದುಲ್ ರಜಾಕ್ ಲೋಣಿ, ಪೀಟರ್ ಅಲೆಕ್ಸಾಂಡರ್ ಮತ್ತಿತರಿದ್ದರು.