

ವಿಜಯಪುರ: ಬಸವನಬಾಗೇವಾಡಿ ತಾಲೂಕಿನ ಕುದರಿಸಾಲವಾಡಗಿ ಗ್ರಾಮದಲ್ಲಿ ದಲಿತ ಬಾಲಕಿಯರಿಬ್ಬರ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸಿದೆ ಎಂದು ಸಂಚಾಲಕ ಸಿದ್ದು ರಾಯಣ್ಣವರ ತಿಳಿಸಿದರು.
ಮಂಗಳವಾರ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಅವರು, ಸದರಿ ಘಟನೆಯಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ದಲಿತರ ಮೇಲಿನ ದೌರ್ಜನ್ಯ, ಶೋಷಣೆಗೆ ಇದೊಂದು ಕೈಗನ್ನಡಿ. ಇಂಥ ಘಟನೆಗಳು ಪದೇ ಪದೆ ಮರುಕಳಿಸುತ್ತಲೇ ಇದ್ದು, ಇವುಗಳ ತಡೆಗೆ ಸರ್ಕಾರ ಕಠಿಣ ಕಾನೂನು ರೂಪಿಸಬೇಕು ಎಂದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದಲಿತರ ಮೇಲೆ ಸುಲಿಗೆ, ದಬ್ಬಾಳಿಕೆ, ಕೊಲೆ, ಸಾಮಾಜಿಕ ಬಹಿಷ್ಕಾರ ಮತ್ತು ದಲಿತ ಮಹಿಳೆಯರ ಮೇಲೆ ಅತ್ಯಾಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸಂವಿಧಾನಬದ್ಧ ಹಕ್ಕುಗಳು ಮೊಟಕುಗೊಳ್ಳುತ್ತಿವೆ ಎಂದು ಆಪಾದಿಸಿದರು.
ಕುದರಿಸಾಲವಾಡಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಬಾಲಕಿಯರ ಕುಟುಂಬಕ್ಕೆ 50 ಲಕ್ಷ ರೂ.ಪರಿಹಾರ ಘೋಷಿಸಬೇಕು. ಎರಡೂ ಕುಟುಂಬಗಳಿಗೆ ತಲಾ 5 ಎಕರೆ ಜಮೀನು ನೀಡಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಚೇತನಕುಮಾರ, ಗೋಪಾಲ ಪೂಜಾರಿ, ಬೀರಪ್ಪ ಅರ್ಧಾವೂರ, ರಾಜು ತೊರವಿ, ಸಂಜು ಆಲಗೂರ ಮತ್ತಿತರರಿದ್ದರು.