

ವಿಜಯಪುರ: ವಿಜಯಪುರ ಹಾಲು ಉತ್ಪಾದಕ ಸಹಕಾರ ಸಂಘವು ಕೋವಿಡ್-19 ಸಂದರ್ಭದಲ್ಲೂ ಸದಸ್ಯರು ಹಾಗೂ ರೈತರ ಸಹಕಾರದಿಂದ 14 ಲಕ್ಷ ರೂ. ನಿವ್ವಳ ಲಾಭ ಗಳಿಸಲು ಸಾಧ್ಯವಾಗಿದೆ ಎಂದು ಡೇರಿ ಅಧ್ಯಕ್ಷ ಕೆ. ವೆಂಕಟೇಶ್ ತಿಳಿಸಿದರು.
ಪಟ್ಟಣದ ಶ್ರೀ ಓಂಕಾರೇಶ್ವರಸ್ವಾಮಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ವಿಜಯಪುರ ಹಾಲು ಉತ್ಪಾದಕರ ಸಹಕಾರ ಸಂಘದ 2019-20ನೇ ಸಾಲಿನ ವಾರ್ಷಿಕ ಸಭೆಯಲ್ಲಿ ಮಾತನಾಡಿದರು. ಡೇರಿಯಿಂದ ಬರುವ ಲಾಭವನ್ನು ರೈತರಿಗೆ ಹಂಚಲಾಗುತ್ತಿದೆ. ಪ್ರತಿ ಲೀಟರ್ ಮೇಲೆ ಸರ್ಕಾರ ಹಾಗೂ ಡೇರಿಯಿಂದ ನೀಡುವ ಹಣದ ಹೊರತಾಗಿ ಒಂದೂವರೆ ರೂಪಾಯಿ ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ವಾರ್ಷಿಕವಾಗಿ ಹೆಚ್ಚುವರಿಯಾಗಿ ನೀಡುತ್ತಿರುವ ಮೊತ್ತವೇ ಅಂದಾಜು 25 ಲಕ್ಷ ರೂ. ಆಗುತ್ತದೆ. ಇದರೊಂದಿಗೆ ಈಗ 1.47 ರೂಪಾಯಿ ಬೋನಸ್ ಕೊಡಲಾಗುತ್ತಿದೆ ಎಂದರು.
ವಿಜಯಪುರ ಡೇರಿ ತಾಲೂಕಿನಲ್ಲೇ ಅತ್ಯುತ್ತಮ ಡೇರಿಯಾಗಿದೆ. ಬಮುಲ್‌ಗೆ ಹಾಲು ಸರಬರಾಜು ಮಾಡುವಲ್ಲೂ ಮೊದಲೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಬಮುಲ್‌ನ ದೇವನಹಳ್ಳಿ ತಾಲೂಕು ಒಕ್ಕೂಟದ ಶಿಬಿರದ ವಿಸ್ತರಣಾಧಿಕಾರಿ ಎಂ. ಮುನಿರಾಜು ಮಾತನಾಡಿ, ರೈತರು ಆರ್ಥಿಕವಾಗಿ ಹಾಗೂ ಆಕಸ್ಮಿಕಗಳಿಂದ ತೊಂದರೆಗೆ ಒಳಗಾಗದಂತೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಹಸುಗಳಿಗೆ ವಿಮೆ ಮಾಡಿಸಬೇಕು ಎಂದು ಹೇಳಿದರು.
ಡೇರಿ ಉಪಾಧ್ಯಕ್ಷೆ ಬಿ. ಶ್ವೇತಾ, ನಿರ್ದೇಶಕರಾದ ಟಿ. ವೆಂಕಟೇಶ್, ವಿ. ರವಿ, ಎಸ್. ಅಶೋಕ್ ಕುಮಾರ್, ಟಿ.ಎಂ. ಮಂಜುನಾಥ್, ಎನ್. ಮನೋಹರ್, ಇ.ಸಿ. ಮಂಜುನಾಥ್, ವೈ. ಮುನಿಕೃಷ್ಣ, ಎಂ. ನಾಗರಾಜ್, ಕೆ. ಮುನಿರಾಜು, ಎನ್. ಲಕ್ಷ್ಮಿ, ನಾಮಾಂಕಿತ ಸದಸ್ಯರಾದ ಜಿ. ಮುನೀಂದ್ರ, ಪುರಸಭಾ ಮಾಜಿ ಅಧ್ಯಕ್ಷ ಚಿನ್ನಯ್ಯ, ಡೇರಿ ಮಾಜಿ ಅಧ್ಯಕ್ಷರಾದ ಕೆ. ಕೇಶವ, ರಂಗಣ್ಣ, ವೆಂಕಟರಾಮಯ್ಯ, ಧರ್ಮರಾಯಸ್ವಾಮಿ ದೇವಾಲಯದ ಅಧ್ಯಕ್ಷ ಆರ್. ನಾರಾಯಣಸ್ವಾಮಿ, ಓಂಕಾರೇಶ್ವರಸ್ವಾಮಿ ದೇವಾಲಯದ ಅಧ್ಯಕ್ಷ ತೋಟದಪ್ಪ, ಡೇರಿ ಕಾರ್ಯದರ್ಶಿ ಎನ್. ಮಂಜುನಾಥ್, ಮುಖಂಡ ಎನ್. ಸುಬ್ರಮಣ್ಯಶೆಟ್ಟಿ, ಹಾಲು ಪರೀಕ್ಷಕರಾದ ಎನ್. ಚಂದ್ರಶೇಖರ್, ಎಸ್. ಗಿರೀಶ್, ಪಿ. ನಾರಾಯಣಸ್ವಾಮಿ ಮತ್ತಿತರರು ಇದ್ದರು.