ಪ್ರಾಣವಾಯು ಒದಗಿಸಲು ಡಿಸಿ ಸರ್ಕಸ್ !

Oxegen
Published on

ವಿಜಯಪುರ: ಕರೊನಾ ಸೋಂಕಿತರ ವಿಷಯದಲ್ಲಿ ಸವಾಲಾಗಿ ಪರಿಣಮಿಸಿರುವ ಬೆಡ್ ಸಮಸ್ಯೆ, ರೆಮ್‌ಡೆಸಿವಿರ್ ಹಾಗೂ ಆಕ್ಸಿಜನ್ ಸಮಸ್ಯೆ ನೀಗಿಸಲು ಜಿಲ್ಲಾಡಳಿತ ದಿನಕ್ಕೊಂದು ಸರ್ಕಸ್ ಮಾಡುತ್ತಿದ್ದು, ಇದೀಗ ಪ್ರಾಣವಾಯು ಒದಗಿಸಲು ತೀವ್ರ ಹರಸಾಹಸ ನಡೆಸಿದೆ !

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸಕಾಲಕ್ಕೆ ಆಕ್ಸಿಜನ್ ಪೂರೈಸಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಜಿಲ್ಲೆಯಲ್ಲಿರುವ ಕುಲಕರ್ಣಿ ಹಾಗೂ ಎಂಆರ್ ಏಜೆನ್ಸಿಯಿಂದ ತಕ್ಕಮಟ್ಟಿಗೆ ಆಕ್ಸಿಜನ್ ಪೂರೈಸಲಾಗುತ್ತಿದೆ. ಬಳ್ಳಾರಿಯ ಜಿಂದಾಲ್, ಧಾರವಾಡ ಮತ್ತಿತರ ಮೂಲಗಳಿಂದ ಆಕ್ಸಿಜನ್ ತರಿಸಿಕೊಳ್ಳಲಾಗುತ್ತಿದೆ. ಆದಾಗ್ಯೂ ಆಕ್ಸಿಜನ್ ಬೇಡಿಕೆ ಹೆಚ್ಚುತ್ತಲೇ ಇರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಅಲ್‌ಅಮೀನ್ ಆಸ್ಪತ್ರೆಯಲ್ಲಿ ಸಮಸ್ಯೆ
ಅಲ್‌ಅಮೀನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗಿದೆ. ಆಸ್ಪತ್ರೆಗೆ ನಿತ್ಯ 40 ಆಕ್ಸಿಜನ್ ಸಿಲಿಂಡರ್ ಹಂಚಿಕೆ ಮಾಡಲಾಗಿದೆ. ಆದರೆ, ಎಂ.ಆರ್ ಇಂಡಸ್ಟ್ರೀಸ್‌ನಿಂದ ಕೇವಲ 10 ಸಿಲಿಂಡರ್ ಮಾತ್ರ ಸಿಗುತ್ತಿದೆ. ಇದರಿಂದ ರೋಗಿಗಳನ್ನು ನಿರ್ವಹಿಸುವುದು ಕಷ್ಟಕರವಾಗಿದೆ. ಹೀಗಾಗಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಎಸ್.ಎಂ. ರಾಶಿನಕರ್ ದೂರು ನೀಡಿದ್ದಾರೆ.

ಆಸ್ಪತ್ರೆಯಲ್ಲಿ 45 ಆಕ್ಸಿಜನ್ ಬೆಡ್ ಸೇರಿ ಒಟ್ಟು 75 ಬೆಡ್‌ಗಳನ್ನು ಕರೊನಾ ಪೀಡಿತರಿಗೆ ಮೀಸಲಿಡಲಾಗಿದೆ. ಆದರೆ, ಅವರಿಗೆ ಆಕ್ಸಿಜನ್ ಸಮಸ್ಯೆ ಕಾಡುತ್ತಿದ್ದು, ಕೂಡಲೇ ಪೂರೈಕೆ ಮಾಡಬೇಕೆಂದು ರಾಶಿನಕರ್ ಮನವಿ ಮಾಡಿದ್ದಾರೆ.

ಕೊಪ್ಪಳ ಡಿಸಿ ಜತೆ ಮಾತುಕತೆ:
ಆಕ್ಸಿಜನ್ ಪೂರೈಕೆಗಾಗಿ ಜಿಲ್ಲಾಡಳಿತ ಕೊಪ್ಪಳ ಹಾಗೂ ಹೊಸಪೇಟೆ ಜಿಲ್ಲಾಡಳಿತದೊಂದಿಗೆ ಸಂಪರ್ಕ ಸಾಧಿಸಿದೆ. ಜಿಲ್ಲೆಯ 12 ಆಸ್ಪತ್ರೆಗಳಿಗೆ ಕೊಪ್ಪಳ ಹಾಗೂ ಹೊಸಪೇಟೆಯಿಂದ ಆಕ್ಸಿಜನ್ ಸರಬರಾಜು ಆಗುತ್ತಿತ್ತು. ಆದರೆ, ಈ ಎರಡು ಮೂಲಗಳಿಂದ ಪೂರೈಕೆಯಾಗುವ ಆಕ್ಸಿಜನ್‌ನಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ಕೊಪ್ಪಳ ಹಾಗೂ ಹೊಸಪೇಟೆಯಿಂದ ಆಕ್ಸಿಜನ್ ತರಿಸಿಕೊಳ್ಳಲು ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರೆ.

ಮೇ 11 ರಂದು ಜಿಲ್ಲೆಯ 22 ಆಸ್ಪತ್ರೆಗಳಿಗೆ ಎಂಆರ್ ಏಜೆನ್ಸಿಯಿಂದ 333 ಹಾಗೂ ಕುಲಕರ್ಣಿ ಏಜೆನ್ಸಿಯಿಂದ 765 ಸೇರಿ ಒಟ್ಟು 1098 ಸಿಲಿಂಡರ್‌ಗಳನ್ನು ಪೂರೈಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇನ್ನು ಕಾನ್ಸನ್‌ಟ್ರೇಟ್‌ಗಳನ್ನು ತರಿಸಿಕೊಳ್ಳಲಾಗಿದ್ದು, ಇನ್ನೂ 30 ಕಾನ್ಸನ್‌ಟ್ರೇಟ್‌ಗಳು ಶೀಘ್ರದಲ್ಲೇ ಜಿಲ್ಲೆಗೆ ಬರಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಆಕ್ಸಿಜನ್ ಪೂರೈಕೆ ಜಿಲ್ಲಾಡಳಿತದ ಪಾಲಿಗೆ ಸವಾಲಾಗಿದ್ದು, ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ಸಮಸ್ಯೆ ಮತ್ತು ಸವಾಲುಗಳ ನಡುವೆಯೂ ಆಕ್ಸಿಜನ್ ಪೂರೈಸಲು ಸಾಕಷ್ಟು ಶ್ರಮವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net