

ವಿಜಯಪುರ: ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ನಾಲ್ವರು ಮೃತಪಟ್ಟಿದ್ದು, 140 ಜನರಿಗೆ ಕರೊನಾ ಸೋಂಕು ದೃಢವಾಗಿದೆ. ಮೃತರ ಸಂಖ್ಯೆ 85ಕ್ಕೆ ಏರಿಕೆ ಆಗಿದೆ. ಮೃತರ ಅಂತ್ಯ ಸಂಸ್ಕಾರವನ್ನು ಸರ್ಕಾರದ ಮಾರ್ಗದರ್ಶನದಂತೆ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮಂಗಳವಾರವೂ ಮಹಾಮಾರಿಯ ಅಟ್ಟಹಾಸ ಮುಂದುವರಿದಿದ್ದು, 140 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಇಲ್ಲಿವರೆಗೆ 5,946 ಜನರಿಗೆ ಸೋಂಕು ದೃಢವಾಗಿದ್ದು, 5,001 ಜನರು ಬಿಡುಗಡೆಗೊಂಡಿದ್ದಾರೆ. ಮಂಗಳವಾರ 108 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
67,521 ಜನರ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 60,531 ಜನರ ವರದಿ ನೆಗೆಟಿವ್ ಬಂದಿದೆ. ಇನ್ನೂ 1044 ಜನರ ವರದಿ ಬರಬೇಕಿದೆ. 860 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 53,467 ಜನರ ಮೇಲೆ ನಿಗಾ ವಹಿಸಲಾಗಿದೆ. 40,850 ಜನರು ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ. 7,531 ಜನರು ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ.
ವಿಜಯಪುರ ತಾಲೂಕು ವ್ಯಾಪ್ತಿ 3211, ಬಸವನ ಬಾಗೇವಾಡಿ 555, ಬಬಲೇಶ್ವರ 65, ಚಡಚಣ 35, ದೇವರಹಿಪ್ಪರಗಿ 59, ಇಂಡಿ 517, ಕೊಲ್ಹಾರ 57, ಮುದ್ದೇಬಿಹಾಳ 554, ನಿಡಗುಂದಿ 35, ಸಿಂದಗಿ 481, ತಾಳಿಕೋಟೆ 198, ತಿಕೋಟಾ 76 ಹಾಗೂ ಇತರ ಜಿಲ್ಲೆಗಳಿಂದ ಆಗಮಿಸಿದ 103 ಜನರಿಗೆ ಕೋವಿಡ್ ಸೋಂಕು ತಗುಲಿದೆ.