

ವಿಜಯಪುರ: ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಆಸ್ಪತ್ರೆಗಳು ಕರೊನಾ ದೃಢಪಟ್ಟ ಪ್ರತಿಯೊಬ್ಬ ವ್ಯಕ್ತಿಗೂ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಬೇಕು. ತಾಲೂಕು ಮಟ್ಟದಲ್ಲಿ ಸರಿಯಾದ ರೀತಿ ಚಿಕಿತ್ಸೆ ನೀಡಿ ಅವಶ್ಯಕವಿದ್ದರೆ ಮಾತ್ರ ಜಿಲ್ಲಾಸ್ಪತ್ರೆಯ ಸಹಾಯ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮತ್ತು ತಾಲೂಕು ಮಟ್ಟದ ಆರೋಗ್ಯ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಕರೊನಾ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಆಸ್ಪತ್ರೆಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಲು ಜಿಲ್ಲಾಸ್ಪತ್ರೆಯಿಂದ ಒಂದು ತಂಡವನ್ನು ರಚನೆ ಮಾಡಿಕೊಂಡು ಪ್ರತಿಯೊಂದು ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಸರ್ಕಾರದ ನಿಯಮದಂತೆ ಶೇ.50ಬೆಡ್‌ಗಳಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.
ಜನರಲ್ ಬೆಡ್, ಐಸಿಯು, ಆಕ್ಸಿಜನ್ ಸೌಲಭ್ಯ ಹಾಗೂ ವೆಂಟಿಲೇಟರ್‌ಗಳ ಬಗ್ಗೆ ಖಚಿತ ಮಾಹಿತಿ ಪಡೆದುಕೊಳ್ಳಬೇಕು. ಪ್ರತಿನಿತ್ಯ ತೆಗೆದುಕೊಂಡ ಅಂಕಿಸಂಖ್ಯೆಗಳನ್ನು ತಂತ್ರಾಂಶದ ಮೂಲಕ ಪ್ರತಿಯೊಂದು ಆಸ್ಪತ್ರೆಗಳಲ್ಲಿ ದಾಖಲಾದ ಹಾಗೂ ಬಿಡುಗಡೆಯಾದ ರೋಗಿಗಳ ಅಂಕಿ ಸಂಖ್ಯೆಯನ್ನು ತಂತ್ರಾಂಶದ ಮೂಲಕ ಪ್ರತಿದಿನ ದಾಖಲೆ ಇಡಬೇಕು ಹಾಗೂ ಸಂಬಂಧಪಟ್ಟ ವೆಬ್‌ಸೈಟ್‌ಗಳಲ್ಲಿ ಪ್ರತಿದಿನ ಮಾಹಿತಿ ದಾಖಲಿಸಬೇಕು ಎಂದರು.
ಬಡ ಜನರು ಖಾಸಗಿ ಆಸ್ಪತ್ರೆಗಳಿಗೆ ಪರದಾಡದ ರೀತಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಆಸ್ಪತ್ರೆಗಳು ಕಾರ್ಯನಿರ್ವಹಿಸಬೇಕು. ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳು ಹೆಚ್ಚು ದುಡ್ಡು ವಸೂಲಿ ಮಾಡದಂತೆ ನೋಡಿಕೊಳ್ಳಬೇಕು. ಹೆಚ್ಚು ದುಡ್ಡು ವಸೂಲಿ ಮಾಡಿದಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಪ್ರತಿದಿನ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಜಿಪಂ ಸಿಇಒ ಗೋವಿಂದ ರೆಡ್ಡಿ, ಜಿಲ್ಲಾಸ್ಪತ್ರೆಯ ಆರೋಗ್ಯ ಅಧಿಕಾರಿಗಳು ಮತ್ತಿತರರಿದ್ದರು.
ಹೆಚ್ಚಿನ ದರಕ್ಕೆ ಔಷಧ ಮಾರಿದರೆ ಕಾನೂನು ಕ್ರಮ
ಕರೊನಾ ಸೋಂಕು ನಿವಾರಣೆಗೆ ನೀಡಲಾಗುತ್ತಿರುವ ಔಷಧ ಹಾಗೂ ಚುಚ್ಚುಮದ್ದುಗಳನ್ನು ಎಂಆರ್‌ಪಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ವೃತ್ತ ಸಹಾಯಕ ಔಷಧ ನಿಯಂತ್ರಕಿ-1 ನಾಗಠಾಣ ಶ್ವೇತಾ ವೀರಣ್ಣ ತಿಳಿಸಿದ್ದಾರೆ.
ಸರ್ಕಾರದಿಂದ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆಯುವುದು, ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಕ್ರಮಕ್ಕೆ ಒಳಗಾಗಬೇಕಾಗುತ್ತದೆ. ಅದರಂತೆ ಕರೊನಾ ಆಸ್ಪತ್ರೆ ಸಂಬಂಧಿಸಿದ ಔಷಧ ಮಳಿಗೆಗಳಲ್ಲಿ ಔಷಧ ಅಥವಾ ಚುಚ್ಚುಮದ್ದುಗಳು ದಾಸ್ತಾನಿನ ಅವಶ್ಯಕತೆ ಇದ್ದರೆ ಈ ಕುರಿತು ಮುಂಚಿತವಾಗಿ ಲಿಖಿತವಾಗಿ ಮಾಹಿತಿ ನೀಡಲು ಅವರು ತಿಳಿಸಿದ್ದಾರೆ.
ಔಷಧ ಮತ್ತು ಕಾಂತಿವರ್ಧಕ ಅಧಿನಿಯಮ 1940 ನಿಯಮಾವಳಿಗಳಂತೆ ಪ್ರತಿಯೊಂದು ಔಷಧ ಖರೀದಿ ಮತ್ತು ಮಾರಾಟ ವಿವರಗಳನ್ನು ಕಾಯ್ದಿರಿಸುವುದು ತಮ್ಮ ಆದ್ಯ ಕರ್ತವ್ಯವಾಗಿದ್ದು, 18 ಎ ಮತ್ತು 18 ಬಿ ಕಾಯ್ದೆ ಅಡಿಯಲ್ಲಿ ಏ.1 ರಿಂದ ಈವರೆಗೆ ರೆಮ್‌ಡಿಸಿವಿರ್ ಔಷಧಕ್ಕೆ ಸಂಬಂಧಪಟ್ಟಂತೆ ಖರೀದಿ ಹಾಗೂ ಮಾರಾಟ ವಿವರಗಳ ಪ್ರತಿಯನ್ನು ಕೂಡಲೇ ಆದ್ಯತೆ ಮೇರೆಗೆ ಕಚೇರಿಗೆ ನೀಡಲು ನಿರ್ದೇಶಿಸಲಾಗಿದೆ.
ಮುಂದಿನ ದಿನಗಳಲ್ಲಿ ಕೂಡ ರೆಮ್‌ಡಿಸಿವಿರ್ ಇಂಜೆಕ್ಷನ್‌ಗೆ ಸಂಬಂಧಪಟ್ಟಂತೆ ಖರೀದಿ ಮತ್ತು ಮಾರಾಟ ವಿವರಗಳನ್ನು 18 ಎ ಮತ್ತು 18 ಬಿ ಗಳ ಅಡಿಯಲ್ಲಿ ಪ್ರತಿನಿತ್ಯ ಈ ಕಚೇರಿಗೆ ಸೂಕ್ತ ದಾಖಲಾತಿಗಳೊಂದಿಗೆ ಸಲ್ಲಿಸಲು ನಿರ್ದೇಶಿಸಲಾಗಿದ್ದು, ತಪ್ಪಿದ್ದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
24 ಗಂಟೆಯಲ್ಲಿ 350 ಪ್ರಕರಣ ಪತ್ತೆ
24 ಗಂಟೆಯಲ್ಲಿ ಜಿಲ್ಲೆಯಾದ್ಯಂತ 350 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕು ತೀವ್ರವಾಗಿ ಹರಡುತ್ತಿದೆ.
ಸೋಮವಾರ 308 ಪ್ರಕರಣಗಳು ಪತ್ತೆಯಾಗಿದ್ದು, ಇದೀಗ ಸೋಂಕಿನ ಪ್ರಮಾಣ ಮತ್ತಷ್ಟು ತೀವ್ರವಾಗಿದೆ. ದಿನೇ ದಿನೆ ಏರಿಕೆಯಾಗುತ್ತಿರುವ ಪಾಸಿಟಿವ್ ಪ್ರಕರಣಗಳಿಂದಾಗಿ ಜನ ಆತಂಕಕ್ಕೆ ಈಡಾಗಿದ್ದಾರೆ.
ವಿಜಯಪುರ ನಗರ-204, ವಿಜಯಪುರ ಗ್ರಾಮೀಣ-34, ಬಬಲೇಶ್ವರ-5, ತಿಕೋಟಾ-5, ಬ.ಬಾಗೇವಾಡಿ-10, ಕೊಲ್ಹಾರ-6, ಇಂಡಿ-13, ಚಡಚಣ-3, ಮುದ್ದೇಬಿಹಾಳ-17, ತಾಳಿಕೋಟೆ-7, ಸಿಂದಗಿ-43, ದೇ.ಹಿಪ್ಪರಗಿ-1, ಇತರ ಜಿಲ್ಲೆ-2 ಪ್ರಕರಣಗಳು ದಾಖಲಾಗಿವೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 17378ಕ್ಕೆ ಏರಿಕೆಯಾಗಿದೆ. ಈವರೆಗೆ 15453 ಜನ ಗುಣಮುಖರಾಗಿದ್ದಾರೆ. ಇನ್ನೂ 1709 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. 2844 ಜನರ ವರದಿ ಬಾಕಿ ಇದೆ ಎಂದು ಜಿಲ್ಲಾಡಳಿತ ತಿಳಿಸಿದೆ.