

ವಿಜಯಪುರ: ಕರೊನಾ ಎರಡನೇ ಅಲೆ ತೀವ್ರವಾಗಿದ್ದು ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು. ಮಾಸ್ಕ್ ಬಳಸಲು ಮತ್ತು ಪರಸ್ಪರ ಅಂತರ ಕಾಯ್ದುಕೊಳ್ಳಲು ಜನರಿಗೆ ಅಧಿಕಾರಿಗಳು ತಿಳಿಹೇಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಇಂಡಿ ಮಿನಿ ವಿಧಾನಸೌಧದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ಕರೊನಾ ಸಾಂಕ್ರಾಮಿಕ ರೋಗ ಹರಡದಂತೆ ನಿಯಂತ್ರಿಸುವ ಕುರಿತಂತೆ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಕರೊನಾ ರೂಪಾಂತರ ವೈರಸ್ ಅಪಾಯಕಾರಿಯಾಗಿದೆ. ಮಕ್ಕಳು ಮತ್ತು ಯುವಕರು ಈ ರೋಗಕ್ಕೆ ಹೆಚ್ಚು ತುತ್ತಾಗುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಜರ್ ಬಳಸಬೇಕು. ಈ ಕುರಿತು ಅಧಿಕಾರಿಗಳು ವ್ಯಾಪಕ ಜಾಗೃತಿ ಮೂಡಿಸಬೇಕೆಂದು ಸೂಚಿಸಿದರು.
ಇಂಡಿ ಆಸ್ಪತ್ರೆ ಸ್ಥಿತಿಗತಿ
ಇಂಡಿ ಸರ್ಕಾರಿ ಆಸ್ಪತ್ರೆಯಲ್ಲಿ 77 ಬೆಡ್‌ಗಳಿದ್ದು, ಅದರಲ್ಲಿ 45 ಆಕ್ಸಿಜನ್ ಬೆಡ್‌ಗಳಿವೆ. 2 ವೆಂಟಿಲೇಟರ್‌ಗಳಿವೆ. ಬಿಡುಗಡೆಯಾದ ಕರೊನಾ ಸೋಂಕಿತರ ವಿವರಗಳ ಆಧಾರದ ಮೇಲೆ ಹಾಸಿಗೆ ಲಭ್ಯತೆ ಮಾಹಿತಿಯನ್ನು ಸಂಗ್ರಹಿಸಿ ಮ್ಯಾನೇಜ್ಮೆಂಟ್ ಪೋರ್ಟಲ್ನಲ್ಲಿ ದಾಖಲಿಸಬೇಕು. ರೋಗಿಗಳಿಗೆ ಯಾವುದೇ ರೀತಿಯ ಬೆಡ್‌ಗಳ ಸಮಸ್ಯೆ ಆಗದಂತೆ ನೋಡಿಕೊಳ್ಳಲು ವೈದ್ಯಾಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗಾಗಿ ಸದ್ಯಕ್ಕೆ ರೆಮ್ಡೆಸಿವರ್ ಲಸಿಕೆ ಬಂದಿದ್ದು, ಜಿಲ್ಲೆಗೆ ಬೇಡಿಕೆಗೆ ಅನುಗುಣವಾಗಿ ಈಗಾಗಲೇ ಖಾಸಗಿ ಆಸ್ಪತ್ರೆಗಳಿಗೆ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ವಿತರಿಸಲಾಗಿದೆ. ಇದರ ಕೊರತೆ ನೀಗಿಸಲು ನಿರಂತರ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಆಕ್ಸಿಜನ್ ಪೂರೈಕೆ
ಬಳ್ಳಾರಿಯಿಂದ ವಾರದಲ್ಲಿ ಎರಡು ಬಾರಿ ಎಲ್‌ಎಂಒ ಪಡೆಯಲಾಗುತ್ತಿದೆ. ಪ್ರತಿ ಸಲ ಸುಮಾರು 13 ಕೆಎಲ್ ಆಕ್ಸಿಜನ್ ಪೂರೈಕೆಯಾಗುತ್ತಿದೆ. ಇದನ್ನು 1400 ಆಮ್ಲಜನಕ ಸಿಲಿಂಡರ್‌ಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಹಾಗೂ ಪ್ರತಿದಿನ 400 ಸಿಲಿಂಡರ್‌ಗಳನ್ನು ಕುಲಕರ್ಣಿ ಆಕ್ಸಿಜನ್ ಏಜೆನ್ಸಿಯು ಉಳಿದ ಖಾಸಗಿ ಆಸ್ಪತ್ರೆಗಳಿಗೆ ಹಾಗೂ ತಾಲೂಕು ಆಸ್ಪತ್ರೆಗೆ ಪೂರೈಸುತ್ತಿದೆ ಎಂದರು.
ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್, ಆಕ್ಸಿಜನ್ ಮತ್ತು ವ್ಯಾಕ್ಸಿನ್ ಪೂರೈಕೆ ಮಾಡುವಂತೆ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು.
ವಿಪ ಸದಸ್ಯ ಅರುಣ ಶಹಾಪುರ, ಎಸ್‌ಪಿ ಅನುಪಮ ಅಗರವಾಲ್, ಉಪವಿಭಾಗಾಧಿಕಾರಿ ರಾಹುಲ ಸಿಂಧೆ, ಡಿಎಚ್‌ಒ ಡಾ. ಮಹೇಂದ್ರ ಕಾಪ್ಸೆ, ತಹಸೀಲ್ದಾರ್ ಸಿ.ಎಸ್. ಕುಲಕರ್ಣಿ, ತಾಲೂಕು ವೈದ್ಯಾಧಿಕಾರಿ ಡಾ. ಕೋಳೆಕರ ಮತ್ತಿತರರಿದ್ದರು.